ಮೊದಲ ಕ್ಯಾಬಿನೆಟ್ನಲ್ಲೇ ಗ್ಯಾರಂಟಿ ಕಾರ್ಡ್ನಲ್ಲಿ ಭರವಸೆ ಈಡೇರಿಕೆ: ಕೆ ಸಿ ವೇಣುಗೋಪಾಲ್ ಮಂಗಳೂರು:ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, ಮೊದಲ ಕ್ಯಾಬಿನೆಟ್ನಲ್ಲಿಯೇ ಪಕ್ಷ ನೀಡಿದ ಗ್ಯಾರಂಟಿ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯಸಭಾ ಸದಸ್ಯ ಕೆಸಿ ವೇಣುಗೋಪಾಲ್ ಹೇಳಿದರು.
ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಜನತೆ ಕಾಂಗ್ರೆಸ್ ಪಕ್ಷವನ್ನು ಸ್ಪಷ್ಟ ಬಹುಮತದಲ್ಲಿ ಗೆಲ್ಲಿಸಲು ತೀರ್ಮಾನಿಸಿದ್ದಾರೆ. ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಚುನಾವಣೆ ಸಂದರ್ಭದಲ್ಲಿ ನೀಡಲಾದ ಭರವಸೆಗಳಾದ ಉಚಿತ ವಿದ್ಯುತ್, ಮಹಿಳೆಯರಿಗೆ ಮಾಸಾಸನ, ನಿರುದ್ಯೋಗ ಭತ್ಯೆ, 10 ಕೆಜಿ ಅಕ್ಕಿ ನೀಡುವುದನ್ನು ಮೊದಲ ಕ್ಯಾಬಿನೆಟ್ನಲ್ಲಿ ಈಡೇರಿಸುತ್ತೇವೆ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಚುನಾವಣೆ ಸಂದರ್ಭದಲ್ಲಿ ನೀಡಿದ ಶೇ.90ರಷ್ಟು ಭರವಸೆಯನ್ನು ಈಡೇರಿಸಿದೆ. ಕಳೆದ ಬಾರಿ ಬಿಜೆಪಿ ನೀಡಿದ ಶೇ.75ರಷ್ಟು ಭರವಸೆಯನ್ನು ಸರ್ಕಾರ ಈಡೇರಿಸಿಲ್ಲ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರ ರಾಜ್ಯದ ಇತಿಹಾಸದಲ್ಲೇ ಅತ್ಯಂತ ಭ್ರಷ್ಟ ಸರ್ಕಾರವಾಗಿದ್ದು, ಅದರಲ್ಲಿಯೂ ಬಸವರಾಜ ಬೊಮ್ಮಾಯಿ ಅವಧಿ ಹಿಂದಿನ ಭ್ರಷ್ಟಾಚಾರದ ದಾಖಲೆಯನ್ನೇ ಮುರಿದಿದೆ. ಶೇ.40ರಷ್ಟು ಕಮಿಷನ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ ಎಂದು ಜನರೆ ಹೇಳುತ್ತಿದ್ದಾರೆ ಎಂದರು. ಭ್ರಷ್ಟಾಚಾರ ರಹಿತ, ಪಾರದರ್ಶಕ ಸರ್ಕಾರ ರಚಿಸುವ ನಿಟ್ಟಿನಲ್ಲಿ ಪ್ರಣಾಳಿಕೆಯನ್ನೂ ಸಿದ್ಧಪಡಿಸುತ್ತಿದ್ದು, ಶೀಘ್ರ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು ಎಂದರು.
ಮಂಗಳೂರಿಗೆ ರಾಹುಲ್ ಗಾಂಧಿ, ಅಮಿತ್ ಶಾ ಭೇಟಿ: ರಾಜ್ಯ ವಿಧಾನಸಭೆ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕರಾವಳಿ ಜಿಲ್ಲೆಗೆ ಕಾಂಗ್ರೆಸ್ ಮತ್ತು ಬಿಜೆಪಿಯ ರಾಷ್ಟ್ರೀಯ ನಾಯಕರ ದಂಡೇ ಬರುತ್ತಿದೆ. ಗುರುವಾರ ಕಾಂಗ್ರೆಸ್ ರಾಷ್ಟ್ರೀಯ ಮುಖಂಡ ರಾಹುಲ್ ಗಾಂಧಿ ಅವರು ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಬೆಳಗ್ಗೆ ಉಡುಪಿ ಜಿಲ್ಲೆಯಲ್ಲಿ ಚುನಾವಣೆ ಪ್ರಚಾರ ನಡೆಸಲಿರುವ ರಾಹುಲ್ ಗಾಂಧಿ, ಮಧ್ಯಾಹ್ನ 3.30 ಕ್ಕೆ ಮಂಗಳೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಳ್ಳಲಿದ್ದಾರೆ. ಸಹ್ಯಾದ್ರಿ ಕಾಲೇಜಿನ ಮೈದಾನದಲ್ಲಿ ಜರುಗುವ ಪ್ರಚಾರ ಸಭೆಯಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ.
ಅಡ್ಯಾರ್ ಸಹ್ಯಾದ್ರಿ ಕಾಲೇಜಿನ ಕಾಂಗ್ರೆಸ್ ಸಮಾವೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಆಗಮಿಸಲಿದ್ದಾರೆ. ರಾಹುಲ್ ಗಾಂಧಿ ಕಾರ್ಯಕ್ರಮ ನಾಳೆ ನಡೆಯುವ ಹಿನ್ನೆಲೆಯಲ್ಲಿ ಅಡ್ಯಾರ್ ಸಹ್ಯಾದ್ರಿ ಕಾಲೇಜಿನ ಮೈದಾನದಲ್ಲಿ ಬಿರುಸಿನ ಪ್ರಚಾರ ನಡೆಯುತ್ತಿದೆ.
ಏಪ್ರಿಲ್ 29 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರೋಡ್ ಶೋ ನಡೆಸಲಿದ್ದಾರೆ. ಚುನಾವಣಾ ಘೋಷಣೆ ಆಗುವ ಮುನ್ನ ಮಂಗಳೂರಿನಲ್ಲಿ ಮಿನಿ ರೋಡ್ ಶೋ ನಡೆಸಿ ಸಂಚಲನ ಮೂಡಿಸಿದ್ದ ಅಮಿತ್ ಶಾ ಅವರು ಮತ್ತೆ ಏಪ್ರಿಲ್ 29ಕ್ಕೆ ಮಂಗಳೂರಿಗೆ ಬಂದು ರೋಡ್ ಶೋ ನಡೆಸಲಿದ್ದಾರೆ. ಏ.29ರಂದು ಸಂಜೆ ನಗರದ ಕೊಟ್ಟಾರದಿಂದ ನಾರಾಯಣ ಗುರು ವೃತ್ತ (ಲೇಡಿಹಿಲ್)ವರೆಗೆ ರೋಡ್ ಶೋ ಜರುಗಲಿದ್ದು, ನಂತರ ಅಲ್ಲಿ ನಡೆಯಲಿರುವ ಪ್ರಚಾರ ಸಭೆಯಲ್ಲಿ ಅಮಿತ್ ಶಾ ಭಾಷಣ ಮಾಡಲಿದ್ದಾರೆ.
ಇದನ್ನೂ ಓದಿ:ಅಮಿತ್ ಶಾ ಪ್ರಚೋದಾನಾತ್ಮಕ ಹೇಳಿಕೆ ನೀಡುವುದನ್ನು ನಿಲ್ಲಿಸಲಿ: ಮಲ್ಲಿಕಾರ್ಜುನ ಖರ್ಗೆ