ಮಂಗಳೂರು: ತುಳು ಭಾಷೆಯನ್ನು ಸಂವಿಧಾನದ 8 ನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಇದಕ್ಕಾಗಿ ಜೈ ತುಳುನಾಡು ಸಂಘಟನೆಯು ಟ್ಟಿಟ್ಟರ್ ಕ್ಯಾಂಪೇನ್ ಮಾಡಿ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿತ್ತು. ಇದೀಗ ಇದೇ ಸಂಘಟನೆ ಆಸಕ್ತರಿಗೆ ಉಚಿತವಾಗಿ ತುಳು ಲಿಪಿ ಕಲಿಸುವ ವಿಶಿಷ್ಟ ಪ್ರಯತ್ನವನ್ನು ಸದ್ದಿಲ್ಲದೆ ಮಾಡುತ್ತಿದೆ.
ಶಾಲೆಯಲ್ಲಿ ತುಳು ಪಠ್ಯವಾಗಿ ಐಚ್ಛಿಕ ವಿಷಯವಾಗಿ ಕಲಿಸಲು ಪ್ರಯತ್ನಗಳು ನಡೆಯುತ್ತಿದ್ದರೂ ಅದು ಸಾಧ್ಯವಾಗ್ತಿಲ್ಲ. ಇನ್ನು ನೂರರಲ್ಲಿ ಒಂದು ಪ್ರತಿಶತ ಜನರಿಗೆ ಮಾತ್ರ ತುಳು ಲಿಪಿಯ ಪರಿಚಯವಿದೆ. ಆದ್ದರಿಂದ ಜೈ ತುಳುನಾಡು ಸಂಘಟನೆ ಆಸಕ್ತರಿಗೆ ಉಚಿತವಾಗಿ ಆನ್‌ಲೈನ್ ಮೂಲಕ ತುಳು ಲಿಪಿ ಕಲಿಕಾ ತರಗತಿ ಆರಂಭಿಸಿದೆ. ಸಂಜೆಯ ಹೊತ್ತು ದಿನಕ್ಕೆ ಒಂದು ಗಂಟೆಯ ಕಾಲ ಈ ತರಗತಿ ನಡೆಯುತ್ತಿದೆ. ಕಳೆದ ಮೂರು ವರ್ಷಗಳಿಂದ ಬೇಸಿಗೆ ರಜೆ ದಿನಗಳಲ್ಲಿ ಕಾರ್ಯಾಗಾರಗಳ ಮೂಲಕ ಶಾಲೆಗಳಲ್ಲಿ ವಾರಗಳ ಕಾಲ ತುಳು ಲಿಪಿ ಕಲಿಕಾ ತರಗತಿಗಳನ್ನು ಸಂಘಟನೆ ಆಯೋಜಿಸುತ್ತಾ ಬಂದಿದೆ. ಈ ಬಾರಿ ಲಾಕ್ಡೌನ್ನಿಂದಾಗಿ ಕಾರ್ಯಾಗಾರ ನಡೆಸಲು ಸಾಧ್ಯವಾಗಿಲ್ಲ. ಹೀಗಾಗಿ, ಆನ್‌ಲೈನ್ ಮೂಲಕ ಉಚಿತವಾಗಿ ಕಲಿಸುವ 'ಬಲೆ ತುಳು ಲಿಪಿ ಕಲ್ಪುಗ'(ಬನ್ನಿ ತುಳು ಲಿಪಿ ಕಲಿಯುವ) ಎಂಬ ಹೊಸ ಅಭಿಯಾನವನ್ನು ಆರಂಭಿಸಿದೆ.
ಜೈ ತುಳುನಾಡು ಸಂಘಟನೆಯ ಅಧ್ಯಕ್ಷ ಸುದರ್ಶನ್ ಸುರತ್ಕಲ್ ಆರಂಭದಲ್ಲಿ ಜೈ ತುಳುನಾಡು ಸಂಘಟನೆಯ ಸದಸ್ಯರು ಆಸಕ್ತ ತಮ್ಮ ಪರಿಚಯದವರಿಗೆ ಆನ್‌ಲೈನ್ ಮೂಲಕ ತುಳು ಲಿಪಿ ತರಗತಿ ನಡೆಸುತ್ತೇವೆ ಎಂದು ಪ್ರಚಾರ ಮಾಡಿದ್ದರು. ಇದಕ್ಕಾಗಿ ವಾಟ್ಸ್ ಆ್ಯಪ್ ಗ್ರೂಪ್ಗಳಲ್ಲಿ 50 ರಿಂದ 60 ಕಲಿಕಾಸ್ತರನ್ನು ಸೇರಿಸಿ ತುಳು ಕಲಿಕಾ ತರಗತಿ ಆರಂಭಿಸಲಾಗಿತ್ತು. ದಿನದಲ್ಲಿ ಒಂದು ಗಂಟೆ ಕಾಲ ಗ್ರಾಫಿಕ್ಸ್ ಹಾಗೂ ಬರವಣಿಗೆ ಮೂಲಕ ಐದು ಅಕ್ಷರಗಳಂತೆ ಅಭ್ಯಾಸ ನಡೆಸಲಾಯಿತು. ಅದೇ ರೀತಿ ವಾಯ್ಸ್ ನೋಟ್ ಮೂಲಕವೂ ಯಾವ ರೀತಿ ಬರೆಯಬೇಕೆಂಬ ತರಬೇತಿಯನ್ನು ನೀಡಲಾಯಿತು.
ಪ್ರಸ್ತುತ ಒಂದು ಗ್ರೂಪ್ಗೆ ಮೂವರು ಶಿಕ್ಷಕರು ತರಬೇತಿ ನೀಡುತ್ತಾರೆ. ತರಬೇತಿಯ ಬಳಿಕ ವಿದ್ಯಾರ್ಥಿಗಳು ಅಭ್ಯಾಸ ಮಾಡಿ ಅದೇ ಗ್ರೂಪ್ನಲ್ಲಿ ಪೋಸ್ಟ್ ಮಾಡಬೇಕು. ತಪ್ಪಿದಲ್ಲಿ ಶಿಕ್ಷಕರು ಅದನ್ನು ತಿದ್ದಿ ಮತ್ತೆ ವಿದ್ಯಾರ್ಥಿಗಳಿಗೆ ಕಲಿಸುವ ವ್ಯವಸ್ಥೆ ಮಾಡುತ್ತಾರೆ. ಈ ಆನ್‌ಲೈನ್ ತರಗತಿಗೆ ಎಲ್ಲಾ ಕಡೆಗಳಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆ ತುಳು ಕಲಿಕಾ ತರಗತಿಯನ್ನು ಮತ್ತಷ್ಟು ವಿಸ್ತರಿಸಲು ಅರ್ಜಿಯನ್ನು ತಯಾರು ಮಾಡಿ ಜೈ ತುಳುನಾಡು ಸಂಘಟನೆ ಸಾಮಾಜಿಕ ಎಲ್ಲಾ ಕಡೆ ಹಂಚಿದೆ. ಆಸ್ತಕರು ಅರ್ಜಿ ಭರ್ತಿ ಮಾಡಿ ನೀಡಿದರೆ, ಸಂಘಟನೆಯ ಸದಸ್ಯರು ಅವರನ್ನು ವಾಟ್ಸ್ ಆ್ಯಪ್ ಗ್ರೂಪ್ನಲ್ಲಿ ಸೇರಿಸಿ ತುಳು ಲಿಪಿ ಕಲಿಸುವ ವ್ಯವಸ್ಥೆ ಮಾಡುತ್ತಾರೆ. ಈ ಅಭಿಯಾನ ಬಹಳಷ್ಟು ಜನಪ್ರಿಯಗೊಂಡು ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲದೆ ಕಾಸರಗೋಡು, ಬೆಂಗಳೂರು, ಮುಂಬೈ ಹಾಗೂ ವಿದೇಶಗಳಿಂದಲೂ ಸಾಕಷ್ಟು ಮಂದಿ ತುಳುಲಿಪಿ ಕಲಿಕಾ ತರಗತಿಗೆ ಸೇರಿಕೊಂಡಿದ್ದಾರೆ.
ಜೈ ತುಳುನಾಡು ಸಂಘಟನೆ ಇನ್ನೂ ಒಂದು ಹೆಜ್ಜೆ ಮುಂದುವರಿದು, ಮುಂಬೈ ಕಲಿಕಾಸ್ತರಿಗೆ ಕನ್ನಡ ಬಾರದ ಕಾರಣ ಹಿಂದಿಯಲ್ಲಿಯೇ ತುಳುಲಿಪಿಯನ್ನು ಕಲಿಸುವ ವ್ಯವಸ್ಥೆಯನ್ನು ಮಾಡಿದೆ. ಅದೇ ರೀತಿ ಕಾಸರಗೋಡಿನ ಕಲಿಕಾಸ್ತರಿಗೆ ಮಲಯಾಳಂ ಭಾಷೆ ಮೂಲಕ ತುಳು ಲಿಪಿ ಕಲಿಸಲಾಗುತ್ತಿದೆ. ಈ ಮೂಲಕ ಸಾಕಷ್ಟು ಮಂದಿಗೆ ತುಳು ಲಿಪಿ ಕಲಿಸುವ ಮಹತ್ತರ ಪ್ರಯತ್ನವನ್ನು ಮಾಡಲಾಗಿದೆ.
ಈ ಬಗ್ಗೆ ಜೈ ತುಳುನಾಡು ಸಂಘಟನೆಯ ಅಧ್ಯಕ್ಷ ಸುದರ್ಶನ್ ಸುರತ್ಕಲ್ ಮಾತನಾಡಿ, ಪ್ರಸ್ತುತ ತುಳು ಲಿಪಿ ಕಲಿಕಾ ತರಗತಿಯ ಪುರುಷರ 34 ಮತ್ತು ಮಹಿಳೆಯರ 18 ವ್ಯಾಟ್ಸ್ ಆ್ಯಪ್ ಗ್ರೂಪ್ಗಳಿವೆ. ಒಟ್ಟು 1,500 ವಿದ್ಯಾರ್ಥಿಗಳು ಈಗಾಗಲೇ ತರಬೇತಿ ಪಡೆದು ತುಳು ಲಿಪಿಯಲ್ಲಿಯೇ ಬರೆಯಲು, ಓದಲು ಶಕ್ತರಾಗಿದ್ದಾರೆ. 250 ಕ್ಕೂ ಅಧಿಕ ಮಂದಿ ಆನ್‌ಲೈನ್ ಮೂಲಕ ನಡೆಯುವ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಪ್ರಸ್ತುತ 800 ವಿದ್ಯಾರ್ಥಿಗಳು ತುಳು ಲಿಪಿ ತರಗತಿಯಲ್ಲಿ ಕಲಿಯುತ್ತಿದ್ದು, ಇವರಿಗೆ ತರಬೇತಿ ನೀಡಲೆಂದೇ 63 ಶಿಕ್ಷಕರಿಗೆ ನಮ್ಮ ಸಂಘಟನೆ ತರಬೇತಿ ನೀಡಿದೆ. ಶಿಕ್ಷಕರು ಸಂಜೆ ಒಂದು ಗಂಟೆಯ ಅವಧಿ ಯಾವುದೇ ಸಂಭಾವನೆ ಪಡೆಯದೆ ಸೇವಾ ರೂಪದಲ್ಲಿ ತರಗತಿ ನಡೆಸುತ್ತಿದ್ದಾರೆ ಎಂದು ಹೇಳಿದರು.