ಮಂಗಳೂರು:ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋ ಹೆಸರಿನಲ್ಲಿ ಪುತ್ತೂರಿನ ಮಹಿಳೆಯೋರ್ವರಿಗೆ ರೂ. 12.93 ಲಕ್ಷ ವಂಚನೆ ಮಾಡಲಾಗಿದೆ. ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ನಿವಾಸಿಯಾದ ಝೀನತ್ ಬಾನು ಎಂಬವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ಝೀನತ್ ಬಾನು ಅವರಿಗೆ 2022 ನೇ ಮೇ ತಿಂಗಳಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸ್ಆ್ಯಪ್ ಕರೆ ಮಾಡಿ ತಾನು ರಿಯಾಲಿಟಿ ಶೋ ಕಾರ್ಯಕ್ರಮದಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿದ್ದನು.
ನೀವು 25 ಲಕ್ಷ ರೂ. ಲಾಟರಿ ಗೆದ್ದಿರುವುದಾಗಿ ಹೇಳಿದ್ದಲ್ಲದೆ ಈ ಹಣವನ್ನು ಪಡೆಯಲು ಟ್ಯಾಕ್ಸ್ ಕಟ್ಟಲು ಹಾಗೂ ಇನ್ನಿತರ ಚಾರ್ಜಸ್ ಕಾರಣ ಹೇಳಿ ಮಹಿಳೆಯಿಂದ 2022 ಮೇ ತಿಂಗಳಿನಿಂದ 2023 ಸೆಪ್ಟೆಂಬರ್ 13 ರವರೆಗಿನ ಅವಧಿಯಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ ಸುಮಾರು ರೂ. 12,93,200 ಹಣವನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಸದ್ಯ ಮಹಿಳೆ ನೀಡಿದ ದೂರಿನಂತೆ ದಕ್ಷಿಣ ಕನ್ನಡ ಜಿಲ್ಲಾ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಮಂಗಳೂರು ಇತರ ಅಪರಾಧ ಪ್ರಕರಣಗಳು: ಸಿಸಿಬಿ ಕಾರ್ಯಾಚರಣೆ: ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯ ಬಂಧನ:ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ಸುಮಾರು ಏಳು ತಿಂಗಳುಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.