ಮಂಗಳೂರು:ವಿದೇಶದಲ್ಲಿ ಕೆಲಸದ ಭರವಸೆ ನೀಡಿ ವೀಸಾ ಮಾಡಿ ಕೊಡುವುದಾಗಿ ಹೇಳಿ ಲಕ್ಷಾಂತರ ರೂ. ವಂಚನೆ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಮಾಹಿತಿ ನಗರದ ಬಲ್ಮಠ ನಿವಾಸಿ ಜೆರಿ ಇಥಿಯಲ್ ಶಿಖಾ(32) ಬಂಧಿತ ಆರೋಪಿ. ಕಾವೂರಿನ ಮಹಿಳೆಯೊಬ್ಬರು ವಿದೇಶದಲ್ಲಿ ಉದ್ಯೋಗ ಬಯಸಿ ಏಪ್ರಿಲ್ ತಿಂಗಳಲ್ಲಿ ನಗರದ ಜೆರಿ ಇಥಿಯಲ್ ಶಿಖಾ ಕಚೇರಿಗೆ ತೆರಳಿದ್ದರು.
ಆಗ ಆರೋಪಿ ಯುರೋಪಿನ ಲಿಥುವೇನಿಯಾ ದೇಶದಲ್ಲಿ ಕಚೇರಿ ಕೆಲಸಕ್ಕೆ ನೌಕರರು ಬೇಕಾಗಿದ್ದಾರೆ. ತಿಂಗಳಿಗೆ 3.50 ಲಕ್ಷ ರೂ. ವೇತನ ದೊರೆಯಲಿದೆ. ಆದರೆ, ಉದ್ಯೋಗ ದೊರೆಯಲು 5.5 ಲಕ್ಷ ರೂ. ವೆಚ್ಚ ತಗುಲುವುದಾಗಿ ಆರೋಪಿ ಮಹಿಳೆಗೆ ಹೇಳಿದ್ದನಂತೆ.
ಉದ್ಯೋಗ ದೊರೆಯುವ ಆಶಾಭಾವನೆಯಲ್ಲಿ ಮಹಿಳೆ ತನ್ನ ಒಡವೆಗಳನ್ನು ಅಡವಿಟ್ಟು ಒಂದು ಲಕ್ಷ ರೂ. ನೇರವಾಗಿ ಹಾಗೂ ಒಂದು ಲಕ್ಷ ರೂ. ನೆಫ್ಟ್ ರೂಪದಲ್ಲಿ ನೀಡಿದ್ದರು. ಈ ನಡುವೆ ಆರೋಪಿ ಸಂಬಂಧಪಟ್ಟ ಪ್ರಾಧಿಕಾರದಿಂದ ಪರವಾನಗಿ ಪಡೆಯದಿರುವುದು ಮಹಿಳೆಗೆ ತಿಳಿದು ಬಂದಿದೆ.
ವಿಷಯ ತಿಳಿದು ಮಹಿಳೆ ಹಣ ವಾಪಸ್ ಮಾಡುವಂತೆ ಕೇಳಿಕೊಂಡರೂ ಆರೋಪಿ ಹಣ ನೀಡದೇ ವಂಚಿಸಿದ್ದಾನೆ. ಈ ಸಂಬಂಧ ನೊಂದ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು.
ಈ ಬಗ್ಗೆ ಮಂಗಳೂರು ಬಂದರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದು, ಆತನನ್ನು ಬಂಧಿಸಿದ ಬಳಿಕ ವಂಚನೆಗೊಳಗಾದ ಮತ್ತಿಬ್ಬರು ಸಂತ್ರಸ್ತರು ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ತಿಳಿಸಿದರು.