ಪುತ್ತೂರು:ಕೆಲಸ ಕೊಡಿಸುವ ಆಮಿಷ ತೋರಿಸಿ 10 ಮಂದಿಯಿಂದ 8 ಸಾವಿರ ರೂ. ಹಣ ಪಡೆದು ವಂಚನೆ ಮಾಡಿರುವ ಆರೋಪ ಪ್ರಕರಣವೊಂದು ಇಲ್ಲಿನ ನಗರ ಠಾಣೆಯಲ್ಲಿ ದಾಖಲಾಗಿದೆ.
ಮಂಗಳೂರು ಮೂಲದ ಯುವತಿಯರಿಬ್ಬರು, ತಮ್ಮ ಗೆಳತಿ ನವ್ಯಾ ಮತ್ತು ಆಕೆಯ ಅಣ್ಣ ಎಂದು ಪರಿಚಯಿಸಿಕೊಂಡ ಯತೀಶ್ ಮರೀಲ್ನಿಂದ ಕೆಲಸದ ಆಮಿಷಕ್ಕೊಳಗಾಗಿ ತಮ್ಮಿಂದ ಹಣ ಪಡೆದುಕೊಂಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಕೆಲಸ ಕೊಡಿಸುತ್ತೇವೆ. ಆದರೆ ಒಟ್ಟು 10 ಮಂದಿ ಬೇಕು ಎಂದು ನವ್ಯಾ ಮತ್ತು ಯತೀಶ್ ಮರೀಲ್ ಹೇಳಿದ್ದು, ಅವರಿಗೆ ಪ್ರತಿಯೊಬ್ಬರು ತಲಾ 8 ಸಾವಿರ ಹಣ ನೀಡಿದ್ದಾರೆ. ಇದರಲ್ಲಿ ಒಬ್ಬರು ಮಾತ್ರ ನಗದಾಗಿ ಹಣ ನೀಡಿದ್ದು, ಉಳಿದವರು ಗೂಗಲ್ ಪೇ ಮೂಲಕ ಹಣ ಪಾವತಿ ಮಾಡಿರುತ್ತಾರೆ. ಇದೀಗ ಕೆಲಸ ಬಗ್ಗೆ ವಿಚಾರಿಸಿದಾಗ ಮತ್ತೆ ಹಣ ನೀಡುವಂತೆ ಯತೀಶ್ ಮರೀಲ್ ಒತ್ತಾಯಿಸಿದ್ದಾರೆ. ಹಣ ಕೊಡಲು ನಿರಾಕರಿಸಿದಾದ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಫೋನ್ ಸ್ವಿಚ್ ಆಫ್ ಮಾಡಿರುತ್ತಾರೆ. ಗೆಳತಿ ನವ್ಯಾ ಕೂಡಾ ಉಢಾಪೆಯಿಂದ ಮಾತನಾಡಿದ್ದು, ಈ ಹಣ ನೀಡಿದ್ದಕ್ಕೆ ಯಾವುದೇ ಸಂಬಂಧ ಇಲ್ಲದಂತೆ ವರ್ತಿಸಿದ್ದಾಳೆಂದು ಆರೋಪಿಸಿದ್ದಾರೆ. ಕಳೆದ 10 ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಇದೊಂದು ದೊಡ್ಡ ಮಟ್ಟದ ವಂಚನಾ ಜಾಲ ಎಂಬ ಮಾಹಿತಿ ಲಭ್ಯವಾಗಿದೆ. ಇದೇ ರೀತಿ ವಿವಿಧ ಕಡೆಗಳಲ್ಲಿ ಹಣ ಪಡೆದುಕೊಂಡು ವಂಚನೆ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.