ಮಂಗಳೂರು: ನವ ಮಂಗಳೂರು ಬಂದರಿಗೆ ಹೊಸ ವರ್ಷದ ಮೊದಲ ಪ್ರಸಕ್ತ ಋತುವಿನಲ್ಲಿ ನಾಲ್ಕನೇ ಐಷಾರಾಮಿ ಪ್ರವಾಸಿ ಹಡಗು ಆಗಮಿಸಿದೆ. ಈ ಹೊಸ ವರ್ಷದ ಮೊದಲ ಕ್ರೂಸ್ ಹಡಗು "ದಿ ವರ್ಲ್ಡ್" ಶುಕ್ರವಾರ ಮಧ್ಯಾಹ್ನ 1.30 ಗಂಟೆಗೆ ಆಗಮಿಸಿತು. ಈ ಪ್ರವಾಸಿ ಹಡಗಿನಲ್ಲಿ 123 ಪ್ರಯಾಣಿಕರು ಮತ್ತು 280 ಸಿಬ್ಬಂದಿ ಇದ್ದರು. ಈ ಪ್ರವಾಸಿ ಹಡಗು (ನವ ಮಂಗಳೂರು ಬಂದರು) ಎನ್ ಎಂ ಪಿ ಟಿ ಯ ಬರ್ತ್ ನಂ. 04 ರಲ್ಲಿ ಮೂರು ದಿನಗಳ ಕಾಲ ಉಳಿಯಲಿದ್ದು, 15 ಜನವರಿ 2023 ರಂದು ರಾತ್ರಿ 11 ಗಂಟೆಗೆ ಇಲ್ಲಿಂದ ಹೊರಡಲಿದೆ.
ಮಂಗಳೂರಿಗೆ ಬಂದ ಕ್ರೂಸ್ ಹಡಗಿನಿಂದ ಇಳಿಯುವ ಸಂದರ್ಭದಲ್ಲಿ ಪ್ರಯಾಣಿಕರಿಗೆ ಸಾಂಪ್ರದಾಯಿಕ ರೀತಿಯಲ್ಲಿ ಆತ್ಮೀಯ ಸ್ವಾಗತ ನೀಡಲಾಯಿತು. ಪ್ರವಾಸಿಗರಿಗೆ ವಿವಿಧ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಹಾಗೂ ಪ್ರಯಾಣಿಕರಿಗೆ ವೈದ್ಯಕೀಯ ತಪಾಸಣೆ, ಕಸ್ಟಮ್ಸ್ ಕೌಂಟರ್‌ಗಳು, ಉಚಿತ ವೈ-ಫೈ, ಬಟ್ಟೆ ಮತ್ತು ಕರಕುಶಲ ಮಳಿಗೆಗಳನ್ನು ಬಂದರಿನಲ್ಲಿ ತೆರೆಯಲಾಗಿದೆ.
ಮಂಗಳೂರು ನಗರದ ಸ್ಥಳೀಯ ಮಾರುಕಟ್ಟೆ ಮತ್ತು ಅಂಗಡಿಗಳಿಗೆ ಭೇಟಿ ನೀಡುವ ಪ್ರಯಾಣಿಕರಿಗೆ ಎರಡು ಶಟಲ್ ಬಸ್‌ಗಳು ಸೇರಿದಂತೆ ಸ್ಥಳೀಯ ಪ್ರವಾಸಕ್ಕಾಗಿ ಬಸ್‌ಗಳು, ಕಾರುಗಳು ಮತ್ತು ವ್ಯಾನ್‌ಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಆಯುಷ್ ಇಲಾಖೆಯು ಕ್ರೂಸ್ ಪ್ರಯಾಣಿಕರ ಅನುಕೂಲಕ್ಕಾಗಿ ಕ್ರೂಸ್ ಲಾಂಜ್‌ನಲ್ಲಿ ಧ್ಯಾನ ಕೇಂದ್ರವನ್ನು ಸ್ಥಾಪಿಸಿದೆ. ಮತ್ತು ಪ್ರವಾಸೋದ್ಯಮ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರ ಮೂರು ದಿನಗಳ ವಾಸ್ತವ್ಯದ ಸಮಯದಲ್ಲಿ ಕ್ರೂಸ್ ಪ್ರವಾಸಿಗರ ಮನರಂಜನೆಗಾಗಿ ವಿವಿಧ ಚಟುವಟಿಕೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದೆ ಎಂದು ಮಾಹಿತಿ ದೊರೆತಿದೆ.