ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆ ಕೋಮು ಸೂಕ್ಷ್ಮ ಪ್ರದೇಶ. ಇಲ್ಲಿ ಈ ವರ್ಷ ನಾಲ್ಕು ಕೊಲೆಗಳು ನಡೆದಿವೆ. ಇವು ವೈಯಕ್ತಿಕ ದ್ವೇಷಕ್ಕಾಗಿ ನಡೆದವಾ ಅಥವಾ ಬೇರೆ ಕಾರಣಕ್ಕಾ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಳೆದೆರಡು ದಶಕದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಕಸ್ಮಿಕವಾಗಿಯೋ, ಉದ್ದೇಶಪೂರ್ವಕವಾಗಿಯೋ ನಡೆಯುವ ಹತ್ಯೆಗಳು ರಾಜಕೀಯ ರೂಪ ಪಡೆದು ಅದಕ್ಕೆ ಪ್ರತಿಕಾರ ಕೊಲೆಗಳು ನಡೆಯುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮಾನ್ಯ.
ವರ್ಷದಲ್ಲಿ ನಾಲ್ಕು ಹತ್ಯೆ: ಈ ವರ್ಷವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವೇಷಕ್ಕೆ ನಾಲ್ವರು ಬಲಿಯಾಗಿದ್ದಾರೆ. ಈ ಬಾರಿ ಬೆಳ್ಳಾರೆಯಲ್ಲಿ ಮೊಹಮ್ಮದ್ ಮಸೂದ್ ಎಂಬಾತನ ಕೊಲೆಯ ಮೂಲಕ ಹತ್ಯೆಗಳ ಸರಣಿ ಮುಂದುವರೆದಿದೆ. ಬೆಳ್ಳಾರೆಯಲ್ಲಿ ದಿಟ್ಟಿಸಿ ನೋಡಿದ ಕಾರಣಕ್ಕಾಗಿ ಪಕ್ಷದ ಕಾರ್ಯಕರ್ತರ ಗುಂಪೊಂದು ಹಲ್ಲೆ ನಡೆಸಿತ್ತು. ಗಂಭೀರ ಗಾಯಗೊಂಡಿದ್ದ ಮಸೂದ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.
ಇದಕ್ಕೆ ಪ್ರತಿಕಾರವಾಗಿ ನಡೆದದ್ದು ಪ್ರವೀಣ್ ನೆಟ್ಟಾರ್ ಹತ್ಯೆ. ಬೆಳ್ಳಾರೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ನನ್ನು ಪಿಎಫ್ಐನ ತಂಡವೊಂದು ಹತ್ಯೆ ಮಾಡಿತ್ತು. ಇದು ರಾಷ್ಟಮಟ್ಟದ ಸುದ್ದಿಯಾಯಿತು. ಪ್ರವೀಣ್ ನೆಟ್ಟಾರ್ ಹತ್ಯೆಯ ಸಂದರ್ಭದಲ್ಲಿ ಆಕ್ರೋಶಿತ ಕಾರ್ಯಕರ್ತರ ಗುಂಪು ಬಿಜೆಪಿ ರಾಜ್ಯಾಧ್ಯಕ್ಷರ ಕಾರನ್ನೆ ಅಲುಗಾಡಿಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆಯು ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಪ್ರವೀಣ್ ನೆಟ್ಟಾರ್ ಹತ್ಯೆಗೆ ಪ್ರತಿಕಾರವಾಗಿ ಮಂಗಳೂರಿನ ಸುರತ್ಕಲ್ ನಲ್ಲಿ ಫಾಝಿಲ್ ಎಂಬಾತನ ಹತ್ಯೆ ನಡೆದಿತ್ತು. ಈ ಮೂರು ಸರಣಿ ಹತ್ಯೆಗಳು ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗಿತ್ತು.