ಬಂಟ್ವಾಳ (ದ.ಕ): ಕರ್ನಾಟಕ-ಕೇರಳ ಗಡಿ ಭಾಗದ ಸಾಲೆತ್ತೂರು ಕೊಡಂಗೆಯ ಚೆಕ್ಪೋಸ್ಟ್ನಲ್ಲಿ ವಾಹನ ತಪಾಸಣೆ ವೇಳೆ ವಿಟ್ಲ ಪೊಲೀಸ್ ಉಪನಿರೀಕ್ಷಕರನ್ನೊಳಗೊಂಡ ತಂಡದ ಮೇಲೆ ಗುಂಡಿನ ದಾಳಿ ನಡೆಸಿ, ಪರಾರಿಯಾಗಿದ್ದ ಡಿ ಗ್ಯಾಂಗ್ ಮುಖ್ಯಸ್ಥ ಸೇರಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಡಿ ಗ್ಯಾಂಗ್ ಮುಖ್ಯಸ್ಥ ಎಂದು ಗುರುತಿಸಿಕೊಂಡ ಮೀಯಪದವು ಮೂಡಂಬೈಲು ನಿವಾಸಿ ಅಬ್ದುಲ್ ರಹಿಮಾನ್ ಯಾನೆ ರಹೀಂ (25), ಮಹಾರಾಷ್ಟ್ರ ಜಲಗಾಂವ್ನ ಮುಕುಂದ ನಗರ ನಿವಾಸಿ ರಾಕೇಶ್ ಕಿಶೋರ್ ಬಾವಿಸ್ಕರ್ ಯಾನೆ ರಾಕಿ ಬಾಯ್ (27), ಡಿ ಗ್ಯಾಂಗ್ ಸದಸ್ಯರಾದ ಕಡಂಬಾರು ಬಟ್ಯಪದವು ನಿವಾಸಿ ಮಹಮ್ಮದ್ ಫಯಾಝ್ ಯಾನೆ ಕೂವ ಫಯಾಝ್ (22), ಮಂಗಲ್ಪಾಡಿ ಸೋಂಕಾಳ್ ನಿವಾಸಿ ಹೈದರ್ ಅಲಿ ಯಾನೆ ಹೈದರ್ (20) ಬಂಧಿತ ಆರೋಪಿಗಳಾಗಿದ್ದಾರೆ. ಸದ್ಯ ಆರೋಪಿಗಳನ್ನು 15 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಂಧಿತ ಆರೋಪಿಗಳಿಂದ 7.65 ಎಂಎಂ ಪಿಸ್ತೂಲ್ - 3, ನಾಡ ಕೋವಿ -1 , ಸಜೀವ ಮದ್ದುಗುಂಡು -13, ಒಂದು ಕಾರನ್ನು ವಶ ಪಡೆದುಕೊಳ್ಳಲಾಗಿತ್ತು. ಘಟನೆಯ ದಿನವೇ ಕೇರಳ ಮಂಜೇಶ್ವರ ಮಂಗಲ್ಪಾಡಿ ಬೈತಿಲ ನಿವಾಸಿ ಅಬ್ದುಲ್ ಲತೀಫ್ ಯಾನೆ ಲತ್ತಿ ಯಾನೆ ಲತೀಫ್ (23), ಮೀಂಜ ಮೀಯಪದವು ಬೆಚ್ಚಂಗಳ ನಿವಾಸಿ ಮಹಮ್ಮದ್ ಶಾಕೀರ್ ಯಾನೆ ಶಾಕೀರ್ (26), ಮೂಡಂಬೈಲು ಅಡ್ಕಂತಗುರಿ ನಿವಾಸಿ ಮಹಮ್ಮದ್ ಅಶ್ವಕ್ ಯಾನೆ ಅಸ್ಪಾಕ್ (25) ಎಂಬಾತನನ್ನು ಬಂಧಿಸಲಾಗಿತ್ತು.