ಬಂಟ್ವಾಳ:ಮನೆ ಮಂದಿ ಸಮೀಪದಲ್ಲಿಯೇ ನಾಟಕ ನೋಡಲು ಹೋಗಿದ್ದ ಸಂದರ್ಭ ಕಳ್ಳರು ಮನೆಗೆ ನುಗ್ಗಿ ಕೈಗೆ ಸಿಕ್ಕ ಚಿನ್ನ ಮತ್ತು ನಗದನ್ನು ಕದ್ದೊಯ್ದ ಘಟನೆ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ತುಂಬೆ ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ.
ತುಂಬೆ ಸಮೀಪದ ಮಜಿ ಎಂಬಲ್ಲಿ ‘ಶಿವದೂತ ಗುಳಿಗ’ ಎಂಬ ನಾಟಕ ಪ್ರದರ್ಶನ ನಡೆಯುತ್ತಿರುವ ಕಾರಣ ಈ ಪರಿಸರದ ಬಹುತೇಕ ಮನೆಯವರು ನಾಟಕ ವೀಕ್ಷಿಸಲು ಮನೆಗೆ ಬೀಗ ಹಾಕಿ ತೆರಳಿದ್ದರು. ಆದರೆ ನಾಟಕ ವೀಕ್ಷಿಸಿ ವಾಪಸ್ ಮನೆಗೆ ಬಂದು ನೋಡಿದಾಗ ಕಳ್ಳರು ಮನೆಯ ಬೀಗ ಮುರಿದು ನಗದು, ಚಿನ್ನ ದೋಚಿ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.
ಸ್ಥಳಕ್ಕೆ ಬಂಟ್ವಾಳ ಎಸ್.ಐ. ಪ್ರಸನ್ನ, ಅಪರಾಧ ವಿಭಾಗದ ಎಸ್.ಐ. ಸಂಜೀವ, ಎಚ್.ಸಿ. ಸುರೇಶ್ ಹಾಗೂ ಬೆರಳಚ್ಚು ತಜ್ಞರು, ಶ್ವಾನ ದಳ ಆಗಮಿಸಿ ಪರಿಶೀಲನೆ ನಡೆಸಿದರು. ನಾಲ್ಕು ಮನೆಗಳಿಗೆ ಕಳ್ಳರು ನುಗ್ಗಿದ್ದು, ಮೂರು ಮನೆಗಳಲ್ಲಿ ಏನೂ ಸಿಕ್ಕಿಲ್ಲ. ಕೊನೆಯ ಒಂದು ಮನೆಯಲ್ಲಿ ಸುಮಾರು 8 ಸಾವಿರ ರೂ. ನಗದನ್ನು ಕದ್ದೊಯ್ದಿದ್ದಾರೆ.
ಮಜಿ ನಿವಾಸಿ ಮನೋಹರ ಕೊಟ್ಟಾರಿ ಎಂಬವರ ಮನೆಯ ಹಿಂಬಾಗಿಲ ಚಿಲಕ ಮುರಿದು ಮನೆಯೊಳಗೆ ನುಗ್ಗಿದ ಕಳ್ಳರು ಕಪಾಟಿನಲ್ಲಿಟ್ಟಿದ್ದ ಎಂಟು ಸಾವಿರ ರೂ. ನಗದನ್ನು ಕಳ್ಳರು ಕಳವು ಮಾಡಿದ್ದಾರೆ ಎಂದು ಅವರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.