ಮಂಗಳೂರು (ದಕ್ಷಿಣ ಕನ್ನಡ):ಮಳಲಿ ಮಂದಿರ - ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ತಾಂಬೂಲ ಪ್ರಶ್ನೆಯ ಬಳಿಕ ಅಖಿಲ ಭಾರತ ವಿಚಾರವಾದಿ ಸಂಘದ ಅಧ್ಯಕ್ಷ ನರೇಂದ್ರ ನಾಯಕ್ ಅವರು ಜ್ಯೋತಿಷಿಗಳಿಗೆ ಒಂದು ಸವಾಲು ಹಾಕಿದ್ದರು. ಸೀಲ್ ಮಾಡಿದ ಲಕೋಟೆಯಲ್ಲಿರುವುದನ್ನು ನಿಖರವಾಗಿ ಹೇಳಿದರೆ ಒಂದು ಲಕ್ಷ ರೂ. ಬಹುಮಾನ ನೀಡುವುದಾಗಿ ಹಾಕಿದ್ದ ಸವಾಲನ್ನು ನಾಲ್ವರು ಜ್ಯೋತಿಷಿಗಳು ಸ್ವೀಕರಿಸಿದ್ದು ಎಲ್ಲರೂ ವಿಫಲರಾಗಿದ್ದಾರೆ.
ಲಕೋಟೆಯಲ್ಲೇನಿತ್ತು? ಮೇ. 26ರ ಬೆಳಗ್ಗೆ 11.33ಕ್ಕೆ ನರೇಂದ್ರ ನಾಯಕ್ ಅವರು ಏಳು ಲಕೋಟೆಗಳನ್ನು ಸೀಲ್ ಮಾಡಿದ್ದರು. ಮೊದಲ ಲಕೋಟೆಯಲ್ಲಿ ಏನನ್ನೂ ಹಾಕಿರಲಿಲ್ಲ. ಎರಡನೇ ಲಕೋಟೆಯಲ್ಲಿ ಪೇಪರ್ನೊಳಗೆ ಒಂದು ಡಾಲರ್ ಇರಿಸಲಾಗಿತ್ತು. ಮೂರನೇ ಲಕೋಟೆಯಲ್ಲಿ ಅರಬ್ ದೇಶದ 10 ದಿರಾಮ್, ನಾಲ್ಕನೇ ಲಕೋಟೆಯಲ್ಲಿ ನೇಪಾಲದ 20 ರೂ., 5ನೇ ಲಕೋಟೆಯಲ್ಲಿ ಸಿಂಗಾಪುರದ 10 ಡಾಲರ್ ಬಿಲ್, 6ನೇ ಕವರ್ನಲ್ಲಿ " ASTROLOGY HAS FLOPPED MISERABLY ONCE AGAIN" ಎಂದು ಬರೆದ ಪತ್ರ, 7ನೇ ಲಕೋಟೆಯಲ್ಲಿ ಭಾರತದ 10 ರೂ. ಕರೆನ್ಸಿ ಇರಿಸಲಾಗಿತ್ತು. 7 ಲಕೋಟೆಗಳಲ್ಲಿ 6ನ್ನು ಉತ್ತರಿಸಿ, ಅದರಲ್ಲಿ 5 ಸರಿ ಉತ್ತರ ನೀಡುವ 50 ಮಂದಿಗೆ ಒಂದು ಲಕ್ಷ ರೂ. ಬಹುಮಾನವನ್ನು ನೀಡುವುದಾಗಿ ಸವಾಲೊಡ್ಡಿದ್ದರು. ಇದಕ್ಕೆ ಸರಿಯುತ್ತರವನ್ನು ಮೇ. 31ರ ರಾತ್ರಿ 12 ಗಂಟೆಯವರೆಗೆ ಕಳುಹಿಸಲು ಅವಕಾಶವಿತ್ತು.