ಮಂಗಳೂರು (ದಕ್ಷಿಣ ಕನ್ನಡ) : ನಗರದ ಬೈಕಂಪಾಡಿ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಬ್ರೈಟ್ ಪ್ಯಾಕಿಂಗ್ ಪ್ರೈವೇಟ್ ಲಿಮಿಟೆಡ್ನ (Bright Packaging Pvt. Ltd) ಕಂಪನಿಗೆ ಗುಜರಾತ್ನಿಂದ ಬರುತ್ತಿದ್ದ ಕೋಟ್ಯಂತರ ಪ್ಲಾಸ್ಟಿಕ್ ಕಚ್ಚಾ ಸಾಮಗ್ರಿ ಕಳ್ಳತನ ಮಾಡುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ. ಬಂಧಿತರು ಮಂಗಳೂರಿನ ಬಿಜೈ ಕಾಪಿಕಾಡಿನ ಮಹೇಶ್ ಕುಲಾಲ್ ಯಾನೆ ಮಹೇಶ್ ರಘು ಕುಲಾಲ್(38), ಶಕ್ತಿನಗರದ ಅನಂತ ಸಾಗರ(39), ಕಡಂದಳೆಯ ಸಾಯಿ ಪ್ರಸಾದ್ (35), ಚೆನ್ನೈನ ಕಿರಣ್ ಸಮಾನಿ(53) ಆಗಿದ್ದಾರೆ.
ಇದರಲ್ಲಿ ಒಬ್ಬ ಕಂಪನಿ ನೌಕರನಾಗಿದ್ದು, ಉಳಿದ ಮೂವರು ಆತನೊಂದಿಗೆ ಸೇರಿಕೊಂಡು ಕೃತ್ಯ ಎಸಗಿದ್ದಾರೆ. ಮಂಗಳೂರು ಸಿಸಿಬಿ ಹಾಗೂ ಪಣಂಬೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬೈಕಂಪಾಡಿಯ ಬ್ರೈಟ್ ಪ್ಯಾಕೆಜಿಂಗ್ ಪ್ರೈ.ಲಿ. ಎಂಬ ಕಂಪನಿಯಲ್ಲಿ ಪಾಲಿಪ್ರೊಪಿಲೀನ್ ವೋವೆನ್ ಸಾಕ್ಸ್(Polypropylene Woven Sacks) ಉತ್ಪನ್ನ ತಯಾರಿಸುತ್ತಿದೆ. ಇದಕ್ಕೆ ಬೇಕಾದ ಪಾಲಿಪ್ರೊಪಿಲೀನ್ (Polypropylene) ಕಚ್ಚಾ ಸರಕುಗಳನ್ನು ಕಂಪನಿಗೆ ತರಿಸಲಾಗುತ್ತಿತ್ತು. ಕಂಪನಿಗೆ ಲಾರಿಯಲ್ಲಿ ಬರುತ್ತಿದ್ದ ಪಾಲಿಪ್ರೊಪಿಲೀನ್ ಕಚ್ಚಾ ಸರಕುಗಳನ್ನು ಕಂಪನಿಯಲ್ಲಿ ಸ್ಟೋರ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದ ಮಹೇಶ್ ಕುಲಾಲ್ ಎಂಬಾತ ಕಂಪನಿಯಲ್ಲಿ ಸ್ವೀಕೃತಿಗೊಂಡಂತೆ ಪೋರ್ಜರಿ ದಾಖಲಾತಿ ಸೃಷ್ಟಿಸಿಕೊಂಡಿದ್ದ.
ಫೇಕ್ ಬಿಲ್ : 2019ನೇ ಡಿಸೆಂಬರ್ ತಿಂಗಳಿನಿಂದ 2022 ಜನವರಿ ತಿಂಗಳವರೆಗೆ ಕೋಟ್ಯಂತರ ಮೌಲ್ಯದ 36 ಟ್ರಕ್ಗಳಲ್ಲಿ ಬಂದ ಪಾಲಿಪ್ರೊಪಿಲೀನ್ ಕಚ್ಚಾ ಸರಕುಗಳನ್ನು ಕಂಪನಿಗೆ ತಿಳಿಯದಂತೆ ಕಳವು ಮಾಡಿದ್ದ. ಕಳವು ಮಾಡಿದ ಕಚ್ಚಾ ಸರಕುಗಳನ್ನು ಮಹೇಶ್ ಕುಲಾಲ್ನ ಸ್ನೇಹಿತನಾದ ಅನಂತ ಸಾಗರ ಎಂಬಾತನಿಗೆ ನೀಡಿದ್ದ. ಈ ಕಚ್ಚಾ ಸರಕುಗಳನ್ನು ಅನಂತ ಸಾಗರ್ ಕೆಲಸ ಮಾಡುವ ಬೈಕಂಪಾಡಿಯ ವಿಧಿ ಎಂಟರ್ ಪ್ರೈಸಸ್ನ ಹೆಸರಿನಲ್ಲಿ ನಕಲಿ ಬಿಲ್ ಮಾಡಿ ಅದನ್ನು ಬೆಂಗಳೂರಿನ ಹೆಚ್.ಎಸ್ ಪಾಲಿಮಾರ್ನ ಆರೋಪಿ ಕಿರಣ್ ಸಾಮಾನಿ ಎಂಬುವರಿಗೆ ಮಾರಾಟ ಮಾಡಿದ್ದ.