ಮಂಗಳೂರು:ನಗರದಲ್ಲಿ ಖೋಟಾ ನೋಟು ಸಾಗಣೆ ಮಾಡುತ್ತಿದ್ದ ಇಬ್ಬರನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ ಎಂದು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ ಸಿ ರೋಡ್ ನ ನಿಜಾಮುದ್ದೀನ್ ಯಾನೆ ನಿಜಾಂ (32) ಮತ್ತು ನಗರದ ಜೆಪ್ಪುವಿನ ರಜೀಮ್ ಯಾನೆ ರಾಫಿ (31) ಬಂಧಿತ ಆರೋಪಿಗಳು. ಜನವರಿ 2 ರಂದು ಈ ಆರೋಪಿಗಳು ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ಕೂಟರ್ ವೊಂದನ್ನು ಸುಲಿಗೆ ಮಾಡಿದ್ದರು. ಸಂಜೆ ಈ ಸ್ಕೂಟರ್ನಲ್ಲಿ ಆರೋಪಿಗಳು ಖೋಟಾ ನೋಟು ಸಾಗಿಸುತ್ತಿದ್ದರು. ಇವರಿಂದ 500 ರೂ. ಮುಖಬೆಲೆಯ ಒಟ್ಟು ರೂ 450,000 ನಕಲಿ ನೋಟನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಆರೋಪಿಗಳು ಬೆಂಗಳೂರಿನ ಡ್ಯಾನಿಯಲ್ ಎಂಬಾತನಿಂದ ಈ ನಕಲಿ ನೋಟುಗಳನ್ನು ಪಡೆದುಕೊಂಡು ಮಂಗಳೂರಿನಲ್ಲಿ ಸಾಗಿಸುತ್ತಿದ್ದರು. ಜ. 2 ರಂದು ನಗರದ ನಂತೂರು ಎಂಬಲ್ಲಿ ವಾಹನ ತಪಾಸಣೆಯನ್ನು ಪೊಲೀಸರು ನಡೆಸುತ್ತಿದ್ದ ಸಂದರ್ಭದಲ್ಲಿ ಸ್ಕೂಟರ್ ವೊಂದು ಅತಿವೇಗದಿಂದ ಹೋಗಿದೆ. ಇದನ್ನು ಹಿಡಿದು ತಪಾಸಣೆ ನಡೆಸಿದಾಗ ಖೋಟಾ ನೋಟು ಪತ್ತೆಯಾಗಿದೆ.