ಮಂಗಳೂರು: ನವಮಂಗಳೂರು ಬಂದರು ಪ್ರಾಧಿಕಾರ ಹಾಗೂ ಮರ್ಮಗೋವಾ ಪ್ರಾಧಿಕಾರಗಳ ವಿವಿಧ ಯೋಜನೆಗಳ ಶಿಲಾನ್ಯಾಸ ಹಾಗೂ ಉದ್ಘಾಟನೆಯನ್ನು ವರ್ಚುವಲ್ ವೇದಿಕೆಯಲ್ಲಿ ಕೇಂದ್ರ ನೌಕಾಯಾನ ಸಚಿವ ಸರ್ಬಾನಂದ ಸೋನೊವಾಲ್ ಅವರು ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ದೇಶದೊಳಗಿನ ಎಲ್ಲಾ ಬಂದರುಗಳ ಸಾಮರ್ಥ್ಯ ಸುಧಾರಣೆಗಾಗಿ ಸಾಗರಮಾಲಾದಡಿ 802 ಯೋಜನೆಗಳನ್ನು ಹಾಕಿಕೊಳ್ಳಲಾಗಿದ್ದು, ಅವುಗಳನ್ನು ಹಂತ ಹಂತವಾಗಿ ಪೂರ್ಣ ಗೊಳಿಸಲಾಗುತ್ತಿದೆ. ದೇಶದ ಅಭಿವೃದ್ಧಿಯಲ್ಲಿ ಬಂದರುಗಳ ಕೊಡುಗೆಯನ್ನು ಗಮನದಲ್ಲಿರಿಸಿಕೊಂಡು ಪ್ರಧಾನಿ ಮೋದಿಯವರು ಹಾಕಿಕೊಂಡ ಸಾಗರಮಾಲಾ ಇವೆಲ್ಲವು ನಡೆಯುತ್ತಿದ್ದು, ಈಗಾಗಲೇ ಸಾಗರಮಾಲಾದಡಿಯಲ್ಲಿ 200 ಕ್ಕೂ ಅಧಿಕ ಯೋಜನೆಗಳು ಪೂರ್ಣಗೊಂಡಿವೆ. ಬಂದರುಗಳ ಆಧುನೀಕರಣ ನಡೆಯುತ್ತಿದ್ದು, ಬಂದರುಮುಖಿ ಕೈಗಾರಿಕೀಕರಣ, ಬಂದರುಮುಖಿ ಸಂಪರ್ಕ ವ್ಯವಸ್ಥೆ , ಕರಾವಳಿ ಸಮುದಾಯ ಅಭಿವೃದ್ಧಿ , ಕರಾವಳಿ ನೌಕಾಯಾನ ಮತ್ತು ಜಲ ಮಾರ್ಗಗಳ ಅಭಿವೃದ್ದಿ ಹಂತಹಂತವಾಗಿ ನಡೆಯುತ್ತಿದೆ ಎಂದರು.