ಸುಬ್ರಹ್ಮಣ್ಯ : ಮಾಜಿ ಪ್ರಧಾನ ಮಂತ್ರಿ ಹಾಗೂ ರಾಜ್ಯ ಸಭಾ ಸಂಸತ್ ಸದಸ್ಯರಾದ ಹೆಚ್ ಡಿ ದೇವೇಗೌಡ ಮತ್ತು ಪತ್ನಿ ಚನ್ನಮ್ಮ ಅವರು ನಿನ್ನೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದು, ಇಂದು ವಿಶೇಷ ಪೂಜೆಗಳನ್ನು ನೆರವೇರಿಸಿ ಮಧ್ಯಾಹ್ನದ ವೇಳೆಗೆ ಬೆಂಗಳೂರಿಗೆ ತೆರಳಲಿದ್ದಾರೆ.
ಹೆಚ್ ಡಿ ದೇವೇಗೌಡ ದಂಪತಿ ನಿನ್ನೆ ಮಧ್ಯಾಹ್ನ ಬೆಂಗಳೂರಿನ ಹೆಚ್ ಎ ಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸುವ ನಿರೀಕ್ಷೆ ಇತ್ತು. ಆದರೆ, ಸಕಲೇಶಪುರ ಮತ್ತು ಕುಕ್ಕೆ ಸುಬ್ರಹ್ಮಣ್ಯ ಕಡೆಗಳಲ್ಲಿ ದಟ್ಟವಾದ ಮೋಡ ಕವಿದ ವಾತಾವರಣವಿದ್ದ ಹಿನ್ನೆಲೆ ಮಂಗಳೂರು ವಿಮಾಣ ನಿಲ್ದಾಣಕ್ಕೆ ಬಂದು ಬಳಿಕ ರಸ್ತೆ ಮಾರ್ಗವಾಗಿ ರಾತ್ರಿಯೇ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ಇಲ್ಲಿ ವಾಸ್ತವ್ಯ ಹೂಡಿದರು.
ಇಂದು ಮುಂಜಾನೆ ದೇಗುಲಕ್ಕೆ ಆಗಮಿಸಿ, ಮಹಾಪೂಜೆ ಹಾಗೂ ಇನ್ನಿತರ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ತುಲಾಭಾರ ಸೇವೆ, ಆಶ್ಲೇಷ ಬಲಿ, ನಾಗ ಪ್ರತಿಷ್ಟೆ ಸೇರಿದಂತೆ ವಿಶೇಷ ಪೂಜೆಗಳಲ್ಲಿ ಭಾಗವಹಿಸಿದ್ದು ಮಧ್ಯಾಹ್ನದ ವೇಳೆಗೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.
ಇದನ್ನೂ ಓದಿ :ಮೈತ್ರಿ ಮಾಡಿಕೊಂಡ ನಂತರ ನಮ್ಮ ಪಕ್ಷದ ಚಿಹ್ನೆ ಉಳಿಯುತ್ತದೆಯೇ ಎಂಬ ಪ್ರಶ್ನೆ ಮೂಡಿದೆ : ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ
ದೇವೇಗೌಡ - ಸಿದ್ದರಾಮಯ್ಯ ಅನಿರೀಕ್ಷಿತ ಭೇಟಿ : ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರನ್ನು ಅನಿರೀಕ್ಷಿತವಾಗಿ ಭೇಟಿಯಾದರು. ಸಿಡಬ್ಲ್ಯೂಸಿ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳಲು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಮಂಗಳೂರಿಗೆ ತೆರಳಲು ಆಗಮಿಸಿದ್ದ ಹೆಚ್ ಡಿ ದೇವೇಗೌಡ ಮತ್ತು ಅವರ ಪತ್ನಿ ಚನ್ನಮ್ಮ ಅನಿರೀಕ್ಷಿತವಾಗಿ ಭೇಟಿ ಮಾಡಿದರು. ಈ ವೇಳೆ ಸಿದ್ದರಾಮಯ್ಯ ಅವರು ದೇವೇಗೌಡರು ಮತ್ತು ಚನ್ನಮ್ಮ ಅವರ ಆರೋಗ್ಯ ವಿಚಾರಿಸಿದರು. ಬಳಿಕ, ದೇವೇಗೌಡರು ಮುಖ್ಯಮಂತ್ರಿಯವರ ಆರೋಗ್ಯ ವಿಚಾರಿಸಿದರು.
ಇದನ್ನೂ ಓದಿ :ಬಿಜೆಪಿ - ಜೆಡಿಎಸ್ ಮೈತ್ರಿ : ಜಾತ್ಯತೀತತೆ ಪ್ರಶ್ನಿಸಿದವರಿಗೆ ಹೆಚ್. ಡಿ. ದೇವೇಗೌಡರಿಂದ ಖಡಕ್ ಉತ್ತರ !
ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಜೊತೆಗಿನ ಮೈತ್ರಿ ಬಳಿಕ ಸಿಎಂ ಸಿದ್ದರಾಮಯ್ಯ ಜೆಡಿಎಸ್ ಹಾಗೂ ದೇವೇಗೌಡರನ್ನು ಟೀಕಿಸಿದ್ದರು. ಬದುಕಿರುವವರೆಗೂ ಬಿಜೆಪಿ ಜತೆ ಸೇರುವುದಿಲ್ಲ ಎಂದು ಹೆಚ್ ಡಿ ದೇವೇಗೌಡರು ಹೇಳಿದ್ದರು. ಆದರೆ, ಈಗ ಅವರೇ ಭಾರತೀಯ ಜನತಾ ಪಕ್ಷದ ಜತೆ ಕೈಜೋಡಿಸುತ್ತಿದ್ದಾರೆ. ಎಲ್ಲಿ ಹೋಯ್ತು ಜಾತ್ಯತೀತ ಮೌಲ್ಯ? ಎಂದು ಸಿಎಂ ಪ್ರಶ್ನಿಸಿದ್ದರು. ಇದಾದ ಬಳಿಕ, ಬಹು ಕಾಲಗಳ ನಂತರ ಆಕಸ್ಮಿಕವಾಗಿ ದೇವೇಗೌಡರು ಹಾಗೂ ಸಿಎಂ ಸಿದ್ದರಾಮಯ್ಯ ಪರಸ್ಪರ ಭೇಟಿ ಮಾಡಿದರು.
ಇದನ್ನೂ ಓದಿ :ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾಜಿ ಪ್ರಧಾನಿ ದೇವೇಗೌಡ - ಸಿಎಂ ಸಿದ್ದರಾಮಯ್ಯ ಅನಿರೀಕ್ಷಿತ ಭೇಟಿ