ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೇಳಿಕೆ ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಹಾಸನ ಜೆಡಿಎಸ್ ಕೈಯಲ್ಲಿದೆ, ರಾಮನಗರ ಕಾಂಗ್ರೆಸ್ ಕೈಯಲ್ಲಿದೆ. ಉಳಿದೆಡೆ ಬಿಜೆಪಿನೇ ಇದೆ. ಕಾಂಗ್ರೆಸ್ ಈ ಬಾರಿ 28 ಸ್ಥಾನಗಳಲ್ಲಿ ಗೆಲ್ಲುವ ಉತ್ಸಾಹದಲ್ಲಿದೆ. ಆ ಕಾರಣಕ್ಕೆ ಬಿಜೆಪಿ, ಜೆಡಿಎಸ್ ಒಂದುಗೂಡಿ ಹೋಗುವ ನಿರ್ಧಾರಕ್ಕೆ ನಾವು ಬಂದಿದ್ದೇವೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರು ತಿಳಿಸಿದ್ದಾರೆ. ಇಂದು ಜಿಲ್ಲೆಯ ಪ್ರಸಿದ್ಧ ನಾಗಾರಾಧನೆ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳಕ್ಕೆ ಪತ್ನಿ ಚನ್ನಮ್ಮ ಅವರೊಂದಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ದೇವೇಗೌಡರು, ಕುಮಾರಸ್ವಾಮಿಯವರು ಈಗಾಗಲೇ ಕೇಂದ್ರ ಗೃಹಮಂತ್ರಿ ಜೊತೆ ಚರ್ಚೆ ನಡೆಸಿದ್ದಾರೆ. ಸೀಟು ಹಂಚಿಕೆಯ ಬಗ್ಗೆ ಇನ್ನೂ ಚರ್ಚೆ ನಡೆಯಬೇಕಷ್ಟೇ. ದಸರಾ ಕಳೆದು ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆಯಲಿದೆ. ನನ್ನ ಆರೋಗ್ಯ ಸುಧಾರಿಸಿದರೆ ನಾನು, ಇಲ್ಲವೇ ಕುಮಾರಸ್ವಾಮಿ ಮತ್ತೆ ಗೃಹಮಂತ್ರಿಗಳ ಜೊತೆ ಚರ್ಚೆ ನಡೆಸಲಿದ್ದೇವೆ ಎಂದು ತಿಳಿಸಿದರು.
ಮೈತ್ರಿಗೂ ಮೊದಲು ಜೆಡಿಎಸ್ ಶಾಸಕರ ಜೊತೆ ಮಾತುಕತೆ :ಮೈತ್ರಿಗೆ ಮೊದಲು ಕುಮಾರಸ್ವಾಮಿ ಅವರು ಜೆಡಿಎಸ್ನ 19 ಎಂಎಲ್‌ಎ, 8 ಎಂಎಲ್‌ಸಿಗಳ ಜೊತೆ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಜೊತೆ ಎರಡು ಸುತ್ತಿನ ಮಾತುಕತೆ ನಡೆಸಿದ್ದಾರೆ. ಬಳಿಕವೇ ಕುಮಾರಸ್ವಾಮಿ ಅವರು ಗೃಹಮಂತ್ರಿಗಳನ್ನು ಭೇಟಿ ಮಾಡಿದ್ದಾರೆ. ಹಿಂದಿನ ಚುನಾವಣೆಯ ಮತಗಳಿಕೆ ಒಟ್ಟುಗೂಡಿಸಿ ಈ ಒಂದು ನಿರ್ಧಾರಕ್ಕೆ ಬರಲಾಗಿದೆ. ಆದರೆ ಯಾವ ಕ್ಷೇತ್ರ ಅನ್ನೋ ಬಗ್ಗೆ ಇನ್ನೂ ಫೈನಲ್ ಆಗಿಲ್ಲ ಎಂದು ಹೇಳಿದರು.
ಮಂಡ್ಯ ಸೇರಿದಂತೆ ಯಾವುದೇ ಸ್ಥಾನಗಳ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಸದ್ಯ ಹಾಸನ ಜೆಡಿಎಸ್ ಕೈಯಲ್ಲಿದೆ, ರಾಮನಗರ ಕಾಂಗ್ರೆಸ್ ಕೈಯಲ್ಲಿದೆ. ಉಳಿದೆಡೆ ಬಿಜೆಪಿನೇ ಇದೆ. ಕಾಂಗ್ರೆಸ್ 28 ಸ್ಥಾನಗಳಲ್ಲಿ ಗೆಲ್ಲುವ ಉತ್ಸಾಹದಲ್ಲಿದೆ. ಆ ಕಾರಣಕ್ಕೆ ಬಿಜೆಪಿ, ಜೆಡಿಎಸ್ ಒಂದುಗೂಡಿ ಹೋಗುವ ನಿರ್ಧಾರಕ್ಕೆ ನಾವು ಬಂದಿದ್ದೇವೆ. ಜಾತಿ ಆಧಾರದಲ್ಲಿ ಮತ ವಿಭಜನೆಯ ಬಗ್ಗೆ ನಾನು ಈಗ ವಾದ ಮಾಡಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶೇಕಡಾವಾರು ಮತ ಬಿಜೆಪಿಗೆ 30-33, ಕಾಂಗ್ರೆಸ್ 40, ಜೆಡಿಎಸ್ 20-22 ಸಿಕ್ಕಿದೆ. ಈ ಬಾರಿಗೆ ಯಾರಿಗೆ ಮತದಾನ ಮಾಡಬೇಕು ಅನ್ನೋದನ್ನು ಮತದಾರ ತೀರ್ಮಾನ ಮಾಡ್ತಾನೆ. ಶಿವಮೊಗ್ಗ ಎಂಬುದು ಸೆನ್ಸಿಟಿವ್ ಏರಿಯಾ. ಅಲ್ಲಿ ಗಲಭೆ ಆಗದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕಿತ್ತು ಎಂದು ಅವರು ಹೇಳಿದರು.
ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ದೇವೇಗೌಡರು :ದೇವೇಗೌಡರುಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದು ನಾಗಪ್ರತಿಷ್ಠೆ, ತುಲಾಭಾರ, ಆಶ್ಲೇಷ ಬಲಿಪೂಜೆ, ಮಹಾಪೂಜೆಯನ್ನು ನೆರವೇರಿಸಿದ್ದು, ಪತ್ನಿ ಚನ್ನಮ್ಮ ಅವರು ಕೂಡಾ ಪೂಜಾ ಕಾರ್ಯಗಳಲ್ಲಿ ಭಾಗಿಯಾದರು. ಬೆಳಗ್ಗೆ 6:30ಗೆ ಆಶ್ಲೇಷ ಪೂಜೆ ನೆರವೇರಿಸಿದ ಹೆಚ್.ಡಿ. ದೇವೇಗೌಡ ದಂಪತಿ ಬಳಿಕ ಸಂಪುಟ ನರಸಿಂಹ ದೇವರ ದರ್ಶನ ಪಡೆದರು. ಆಶ್ಲೇಷ ಬಲಿ ಪೂಜೆಯ ಬಳಿಕ 11 ಗಂಟೆಯವರೆಗೆ ಅವರು ವಿಶ್ರಾಂತಿ ಪಡೆದ ಅವರು ಬಳಿಕ ದೇವಳದಲ್ಲಿ ತುಲಾಭಾರ ಸೇವೆ ಮತ್ತು 12 ಗಂಟೆಯ ಮಹಾಪೂಜೆಯಲ್ಲಿ ಪಾಲ್ಗೊಂಡರು. ಬಳಿಕ ಕುಕ್ಕೆಯಿಂದ ದೇವೇಗೌಡ ಅವರು ಹಾಸನ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಎಂ.ಬಿ. ಸದಾಶಿವ, ದೇವಳದ ಮೋಹನ್ ರಾಮ್ ಸುಳ್ಳಿ, ಜೆಡಿಎಸ್ ಮುಖಂಡ ಸಯ್ಯದ್ ಮೀರಾ ಸಾಹೇಬ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ :ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಹೆಚ್ ಡಿ ದೇವೇಗೌಡ ದಂಪತಿ.. ಮಹಾಪೂಜೆ ನೆರವೇರಿಸಲಿರುವ ಮಾಜಿ ಪ್ರಧಾನಿ