ಮಂಗಳೂರು :ರಾಜ್ಯ ಸರ್ಕಾರಕ್ಕೆ ಪ್ರಜಾಪ್ರಭುತ್ವ ಮಾದರಿ ಆಡಳಿತ ಮಾಡುವ ಬದ್ಧತೆಯಿಲ್ಲ. ಆದ್ದರಿಂದ ರಾಜ್ಯಪಾಲರು ತಕ್ಷಣ ಮಧ್ಯ ಪ್ರವೇಶಿಸಿ ಮುಖ್ಯಮಂತ್ರಿ ಯಡಿಯೂರಪ್ಪನವರಿಂದ ರಾಜೀನಾಮೆ ಸ್ವೀಕರಿಸಲಿ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಆಗ್ರಹಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಜನ ವಿರೋಧಿ, ಭ್ರಷ್ಟಾಚಾರದಲ್ಲಿ ತೊಡಗಿದೆ. ಹಾಗಾಗಿ, ನೇರವಾಗಿ ಚುನಾವಣೆ ನಡೆಯುವ ಮಟ್ಟಕ್ಕೆ ಹೋಗಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಹೇಳಿದರು. ರಾಜ್ಯ ಸರ್ಕಾರ ಬಿಡಿಎನಲ್ಲಿ 666 ಕೋಟಿ ರೂ. ಕಾಮಗಾರಿಯನ್ನು ರಾಮಲಿಂಗಂ ಎನ್ನುವ ಗುತ್ತಿಗೆದಾರನಿಗೆ ವಹಿಸಿತ್ತು. ಆದರೆ, ಬಿಡಿಎನಲ್ಲಿ ಅಷ್ಟೊಂದು ಹಣ ಇರದ ಕಾರಣ ಆ ಕಾಮಗಾರಿ ನಡೆಸಲು ಸಾಧ್ಯವಿಲ್ಲ ಎಂದು ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಪತ್ರ ಮುಖೇನ ರಾಜ್ಯ ಸರ್ಕಾರಕ್ಕೆ ತಿಳಿಸಿದ್ದರು.
ಹಾಗಾಗಿ, ವಿರೋಧ ವ್ಯಕ್ತಪಡಿಸಿದ ಆಯುಕ್ತರನ್ನು ವರ್ಗಾವಣೆ ಮಾಡಿ, ಆ ಜಾಗಕ್ಕೆ ಪ್ರಕಾಶ್ ಎಂಬುವರನ್ನು ನೇಮಕ ಮಾಡಿ, ಈ ಕಾಮಗಾರಿಗೆ ಗ್ರೀನ್ ಸಿಗ್ನಲ್ ಕೊಡಿಸಲಾಗಿತ್ತು. ಇದರಲ್ಲಿ ಸುಮಾರು 24 ಕೋಟಿ ರೂ. ಭ್ರಷ್ಟಾಚಾರವನ್ನು ರಾಜ್ಯದ ಮುಖ್ಯಮಂತ್ರಿ ಹಾಗೂ ಅವರ ಸಂಬಂಧಿಕರು ಮಾಡಿದ್ದಾರೆ ಎಂದು ಆರೋಪಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಸುದ್ದಿಗೋಷ್ಠಿ ಹಾಗಾಗಿ, ಸದನದೊಳಗಡೆ ಬಿಜೆಪಿ ಸರ್ಕಾರದ ಮೇಲೆ ಅವಿಶ್ವಾಸ ನಿರ್ಣಯ ಮಂಡಣೆ ಮಾಡಿ, ಈ ವಿಚಾರವನ್ನು ಗಮನಕ್ಕೆ ತಂದಾಗ ತಬ್ಬಿಬ್ಬಾದ ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಒಬ್ಬೊಬ್ಬರು ಮತ್ತೊಬ್ಬರ ಮುಖ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೊನೆಗೆ ಈ ಕಳ್ಳತನ ಪತ್ತೆ ಹಚ್ಚಿದ್ದವರ ಮೇಲೆ ದಬ್ಬಾಳಿಕೆ ನಡೆದಿದೆ. ಆ ಟಿವಿ ಮಾಧ್ಯಮವನ್ನೇ ಮುಚ್ಚಿಸುವಂತಹ ಕೆಲಸವನ್ನು ಸಿಎಂ ಯಡಿಯೂರಪ್ಪ ಹಾಗೂ ಅವರ ಕುಟುಂಬ ವೃಂದ ನೇರವಾಗಿ ಮಾಡಿದೆ ಎಂದರು.
ಪ್ರಜಾಪ್ರತ್ವದಲ್ಲಿ ಇಷ್ಟು ದೊಡ್ಡ ರೀತಿ ಮಾಧ್ಯಮದ ಮೇಲೆ ನಡೆದಿರುವ ಹಲ್ಲೆ ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಎಂದೂ ನಡೆದಿಲ್ಲ. ಭ್ರಷ್ಟಾಚಾರದ ಆರೋಪ ಬಂದಾಗ ಆ ಬಗ್ಗೆ ತನಿಖೆ ಮಾಡುವುದು ಬಿಟ್ಟು, ಯಾರು ಆರೋಪ ಮಾಡಿದ್ದಾರೆಯೋ ಅವರ ಮೇಲೆ ಹಗೆತನ ಸಾಧಿಸಿ ಟಿವಿ ಮಾಧ್ಯಮವೊಂದನ್ನು ಬಂದ್ ಮಾಡುವ ಪ್ರಯತ್ನಕ್ಕೆ ರಾಜ್ಯ ಸರ್ಕಾರ ಕೈ ಹಾಕಿದೆ. ಹಾಗಾದರೆ, ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಇದೆಯೇ ಎಂದು ಐವನ್ ಡಿಸೋಜ ಪ್ರಶ್ನಿಸಿದರು.
ಕೋವಿಡ್‌ನಿಂದ ಸರ್ಕಾರ ಪ್ರಾಯೋಜಿತ ಮರಣ:ಕೋವಿಡ್-19 ಬಗ್ಗೆ ಮೊನ್ನೆ ನಡೆದ ಅಧಿವೇಶನದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಸಲಾಗಿದೆ. ಅದರಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಎಳೆ ಎಳೆಯಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸದನದ ಗಮನಕ್ಕೆ ತಂದಿದ್ದರು. ಮೊದಲು ಸಿಎಂ ಸಹಿತ ಉಸ್ತುವಾರಿ ಇರುವ ಮಂತ್ರಿಗಳು ಸೇರಿ ಕೋವಿಡ್‌ನಲ್ಲಿ ಸರ್ಕಾರ ಭ್ರಷ್ಟಾಚಾರ ನಡೆಸಿಲ್ಲ ಎಂದು ಹೇಳಿದ್ದರು.
ಕೋವಿಡ್‌ಗೆ ಬಳಸಲಾಗುವ ಕಿಟ್‌ಗಳಿಗಾಗಿ 2 ಸಾವಿರ ಕೋಟಿ ರೂ. ಖರ್ಚು ಮಾಡಿದ್ದೇವೆ ಎಂದು ಹೇಳಿದ್ದರು. ಆದರೆ, ನಾವು ಅಂಕಿ-ಅಂಶಗಳನ್ನು ಸದನದ ಮುಂದಿಟ್ಟಾಗ ವರಸೆ ಬದಲಿಸಿದ ಸರ್ಕಾರ, 4 ಸಾವಿರ ಕೋಟಿ ರೂ. ಖರ್ಚು ಮಾಡಿದ್ದೇವೆ ಎಂದು ಲೆಕ್ಕ ನೀಡಿತು. ಹಾಗಾಗಿ, ಸರ್ಕಾರ ಕೋವಿಡ್ ಸೋಂಕಿತರಿಗೆ ಬಳಸುವ ಹಣದಿಂದಲೂ 2 ಸಾವಿರ ಕೋಟಿ ರೂ. ಭ್ರಷ್ಟಾಚಾರ ನಡೆಸಿದೆ. ಹಾಗೆಯೇ ಕೋವಿಡ್ ಸಂಬಂಧಿತ ಸರಿಯಾದ ಲೆಕ್ಕವನ್ನು ಸದನದ ಮುಂದೆಯಾಗಲಿ, ಜನರ ಮುಂದೆಯಾಗಲಿ ಇಡಲು ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಕೋವಿಡ್ ಸೋಂಕಿನ ಮೂಲಕ ಎಷ್ಟು ಸಾಧ್ಯವೋ ಅಷ್ಟು ಭ್ರಷ್ಟಾಚಾರವನ್ನು ರಾಜ್ಯ ಸರ್ಕಾರ ನಡೆಸಿದೆ. ಕೋವಿಡ್ ಸೋಂಕಿನಿಂದ ಸಾವು ಸಂಭವಿಸಿದಾಗಲೂ ದೊಡ್ಡ ಮಟ್ಟದಲ್ಲಿ ಸರ್ಕಾರ ಹಣ ಮಾಡಿದೆ. ಕೋವಿಡ್‌ಗೆ ಮುಂದೇನು ವ್ಯವಸ್ಥೆ ಅಂದರೆ ಸರ್ಕಾರದ ಮುಂದೆ ಉತ್ತರ ಇಲ್ಲ ಎಂದರು.
ಕೋವಿಡ್‌ಗಾಗಿ ಸರ್ಕಾರಿ ನೇಮಿತ ಆಸ್ಪತ್ರೆಗಳಲ್ಲಿ ಬೆಡ್‌ಗಳಿಲ್ಲ, ವೆಂಟಿಲೇಟರ್‌ಗಳಿಲ್ಲ, ಆ್ಯಕ್ಸಿಜನ್ ಬೆಡ್‌ಗಳಿಲ್ಲ, ಪಿಪಿಇ ಕಿಟ್, ಸ್ಯಾನಿಟೈಸರ್, ತಪಾಸಣೆಗಳಿಲ್ಲ. ಇಂದು ಶೇ.80ರಷ್ಟು ಮಂದಿ ವೆಂಟಿಲೇಟರ್ ಕೊರತೆಯಿಂದ ಕೋವಿಡ್ ಸೋಂಕಿತರು ಮೃತಪಡುತ್ತಿದ್ದಾರೆ. ಮುಂದಕ್ಕೇನು ಮಾಡುವುದು ಎಂಬುದಕ್ಕೆ ಸರ್ಕಾರದ ಮುಂದೆ ಯಾವುದೇ ದಿಕ್ಸೂಚಿ ಇಲ್ಲ. ಹಾಗಾಗಿ, ಯೋಜನೆ-ಯೋಚನೆ ಎರಡೂ ಇಲ್ಲದೆ ಸರ್ಕಾರ ಕೋವಿಡ್ ಸೋಂಕಿತರಿಗೆ ನೀವು ಸಾಯುವುದಾದ್ರೆ ಸಾಯಿರಿ ಎಂದು ಕೈಚೆಲ್ಲಿ ಕುಳಿತಿದೆ. ಇದು ಅತ್ಯಂತ ಖೇದಕರ ಸಂಗತಿ. ಈ ಮೂಲಕ ಕೋವಿಡ್‌ನಿಂದ ಸರ್ಕಾರ ಪ್ರಾಯೋಜಿತ ಮರಣ ಸಂಭವಿಸುತ್ತಿದೆ ಎಂದು ಆರೋಪಿಸಿದರು.