ಬೆಳ್ತಂಗಡಿ : ಕಳೆದ ಆರು ತಿಂಗಳಿನಿಂದ ಕೆಲ ಬಡವರಿಗೆ 94ಸಿ ಹಕ್ಕುಪತ್ರ ನೀಡುತ್ತಿಲ್ಲ. ಜನರು ಬಂದು ವಿಚಾರಿಸಿದ್ರೇ ಏನೇನೋ ಕಾರಣ ಹೇಳುತ್ತಾರೆ. ಈ ಬಗ್ಗೆ ತಹಶೀಲ್ದಾರ್ ತಕ್ಷಣ ಕ್ರಮಕೈಗೊಂಡು 10 ದಿನದೊಳಗೆ ವಿತರಣೆ ಮಾಡಬೇಕು. ಮಾಡದೇ ಇದ್ದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹೋರಾಟ ಮಾಡಲಾಗುವುದು ಎಂದು ಮಾಜಿ ಶಾಸಕ ವಸಂತ ಬಂಗೇರ ಎಚ್ಚರಿಸಿದರು.
ಬೆಳ್ತಂಗಡಿಯಲ್ಲಿ ಮಾತನಾಡಿದ ಅವರು, ಬೆಳ್ತಂಗಡಿ ತಾಲೂಕು ಕಚೇರಿಗಳು ದಲ್ಲಾಳಿಗಳಿಂದ ತುಂಬಿವೆ. ಸುಮಾರು ಒಂದು ಸಾವಿರಕ್ಕಿಂತಲೂ ಅಧಿಕ ದಲ್ಲಾಳಿಗಳು ಕಚೇರಿಯ ಕೆಲವು ಅಧಿಕಾರಿಗಳ ಮೂಲಕ ತಮಗೆ ಬೇಕಾದ ಹಾಗೇ ಕಡತಗಳ ಕೆಲಸಗಳನ್ನು ಲಂಚ ನೀಡಿ ಮಾಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಬಡವರಿಗೆ ಅನ್ಯಾಯವಾಗುತ್ತಿದೆ. ಅದಲ್ಲದೆ ಕೆಲ ಕಡತಗಳು ನಾಪತ್ತೆಯಾಗುತ್ತಿವೆ. ಕಡತಗಳು ನಾಪತ್ತೆಯಾಗಲು ಈ ದಲ್ಲಾಳಿಗಳೇ ಕಾರಣ ಎಂದು ಆರೋಪಿಸಿದರು.
ತಾಲೂಕು ಕಚೇರಿಯಲ್ಲಿನ ದಲ್ಲಾಳಿಗಳ ಹಾವಳಿ ಕುರಿತಂತೆ ಮಾಜಿ ಶಾಸಕರ ಹೇಳಿಕೆ ಅರ್ಜಿ ನೀಡಿದ ದಾಖಲೆ ಇರುವ ನಾಪತ್ತೆಯಾದ ಕಡತಗಳ ಹೊಸ ದಾಖಲೆಗಳನ್ನು ತಹಶೀಲ್ದಾರ್ ಪರಿಶೀಲಿಸಿ ತಕ್ಷಣ ಮಾಡಿಕೊಡಬೇಕು. ಯಾವುದೇ ಕಾರಣಕ್ಕೂ ದಲ್ಲಾಳಿಗಳಿಗೆ ಹಾಗೂ ಕೆಲವು ಅಧಿಕಾರಿಗಳಿಗೆ ವ್ಯವಹಾರ ನಡೆಸಲು ಅವಕಾಶ ಕೊಡಬಾರದು. ಈ ಬಗ್ಗೆ ಸೂಕ್ತ ತನಿಖೆ ಮಾಡಿ ಕ್ರಮಕೈಗೊಳ್ಳಬೇಕು ಎಂದರು.
ನಾಲ್ಕು ಚಕ್ರದ ವಾಹನಗಳಿದ್ದವರು ತಮ್ಮ ಬಿಪಿಎಲ್ ಕಾರ್ಡ್‌ಗಳನ್ನು ಹಿಂದುರಿಗಿಸಬೇಕು ಎಂಬ ಆದೇಶವನ್ನು ಸರ್ಕಾರ ಘೋಷಿಸಿತ್ತು. ಅದರಂತೆ ಕೆಲವರೆಲ್ಲ ಕಾರ್ಡ್ ಹಿಂದಿರುಗಿಸಿದ್ದಾರೆ. ಆದರೂ ಅವರಿಂದ ದಂಡ ವಸೂಲಿ ಮಾಡುವ ಕೆಲಸ ನಡೆದಿದೆ. ಇದನ್ನು ಅವರಿಗೆ ಹಿಂದುರಿಗಿಸಬೇಕು. ಕಳೆದ ನೆರೆ ಸಂದರ್ಭದಲ್ಲಿ ಮನೆ ಹಾಗೂ ಕೃಷಿ ಕಳೆದುಕೊಂಡ ಕೆಲವರಿಗೆ ಮಾತ್ರ ಪರಿಹಾರ ಹಾಗೂ ಮನೆ ಮಂಜೂರಾಗಿದೆ. ಆದರೆ, ಇನ್ನೂ ಅನೇಕ ಸಂತ್ರಸ್ತರಿಗೆ ಪರಿಹಾರ ದೊರಕಿಲ್ಲ. ಸಂತ್ರಸ್ತರಲ್ಲದ ಕೆಲವರಿಗೆ ಪರಿಹಾರದ ಬಗ್ಗೆ ತನಿಖೆ ನಡೆಸಬೇಕು ಎಂದರು.
ಕಾಳಜಿ ರಿಲೀಫ್ ಫಂಡ್ ಲೆಕ್ಕಾಚಾರದಲ್ಲಿ ಗೊಂದಲವಿದೆ. ದಯವಿಟ್ಟು ಶಾಸಕರು ತಾಲೂಕಿನ ಜನತೆಯ ಸಂಶಯ ಬಗೆಹರಿಸಿ, ಅದಷ್ಟೂ ಬೇಗ ಸಂತ್ರಸ್ತರಿಗೆ ಈ ಹಣವನ್ನು ನೀಡಬೇಕು ಎಂದು ಕಾಂಗ್ರೆಸ್ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೈಲೇಶ್ ಕುಮಾರ್ ಕುರ್ತೋಡಿ ಆಗ್ರಹಿಸಿದರು.
ತಾಲೂಕಿನಲ್ಲಿ ಅವ್ಯಾಹತವಾಗಿ ಮರಳು ದಂಧೆ ನಡೆಯುತ್ತಿದೆ. ಪ್ರಭಾವಿಗಳ ಒತ್ತಡದಿಂದ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತುಕೊಂಡಿದ್ದಾರೆ. ಸೇತುವೆಯ ಅಡಿಭಾಗದಿಂದ ಹಾಗೂ ಜೆಸಿಬಿ ಮೂಲಕ ಮರಳು ತೆಗೆಯುವುದಕ್ಕೆ ಅವಕಾಶ ಇಲ್ಲದಿದ್ರೂ ತಾಲೂಕಿನ ಹಲವೆಡೆ ತೆಗೆಯುವಂತಹ ಕೆಲಸ ನಡೆಯುತ್ತಿದೆ. ಹೀಗೆಯೇ ಮರಳು ದಂಧೆ ಮುಂದುವರಿಸಿದ್ರೆ ಮುಂದಿನ ದಿನಗಳಲ್ಲಿ ಕೆಲ ಸೇತುವೆಗಳು ಕುಸಿಯುವ ಸಾಧ್ಯತೆ ಇದೆ. ಇದರ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಗಮನ ಹರಿಸಬೇಕೆಂದು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜನ್ ಜಿ ಗೌಡ ಹೇಳಿದರು.
ಈ ಸಂದರ್ಭದಲ್ಲಿ ಮನೋಹರ್ ಕುಮಾರ್ ಇಳಂತಿಲ, ಕಾಂಗ್ರೆಸ್ ತಾಲೂಕು ಇಂಟಕ್ ಅಧ್ಯಕ್ಷ ನವೀನ್ ಗೌಡ, ಅನಿಲ್ ಪೈ ಉಪಸ್ಥಿತರಿದ್ದರು.