ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ಹೆಣ್ಣು ಮಕ್ಕಳ ಮೇಲೆ ಸಾಕಷ್ಟು ದೌರ್ಜನ್ಯ ಪ್ರಕರಣಗಳು ಕಂಡು ಬರುತ್ತಿದ್ದರೂ ಸರ್ಕಾರ ಅದನ್ನು ತಡೆಯಲು ಆಸಕ್ತಿ ವಹಿಸುತ್ತಿಲ್ಲ. ಆದ್ದರಿಂದ, ಅತ್ಯಾಚಾರ ಮಾಡಿ ಕೊಲೆ ಮಾಡುವವರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸುವ ಕಾನೂನು ಜಾರಿಯಾಗಲಿ ಎಂದು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಆಗ್ರಹಿಸಿದರು.
ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಅವರು ಮಾತನಾಡಿದರು. ಇಂತಹ ಶಿಕ್ಷೆ ನಾಲ್ಕು ಜನರಿಗಾದಲ್ಲಿ ತನ್ನಷ್ಟಕ್ಕೇ ಇಂತಹ ಪ್ರಕರಣಗಳಿಗೆ ಕಡಿವಾಣ ಬೀಳುತ್ತದೆ. ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ, ಅನಾಚಾರ ಹಾಗೂ ದೌರ್ಜನ್ಯ ತಡೆಯಲು ಕಠಿಣವಾದ ಶಾಸನ ಜಾರಿಯಾಗಬೇಕಿದೆ ಎಂದು ಹೇಳಿದರು.
ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರು ಇತ್ತೀಚೆಗೆ ಸುರತ್ಕಲ್ನಲ್ಲಿ ನಡೆದ ಭಾಷಣದಲ್ಲಿ 'ಸುರತ್ಕಲ್ನ ಬಂಟ ಸಮುದಾಯದ ಹೆಣ್ಣೊಬ್ಬಳಿಗೆ ಮುಸ್ಲಿಂ ಯುವಕನೊಂದಿಗೆ ಪ್ರೀತಿಯಿದೆ. ಆಕೆ 30 ವರ್ಷವಾದರೂ ವಿವಾಹವಾಗಿಲ್ಲ' ಎಂದು ಹೇಳಿಕೆ ನೀಡಿದ್ದಾಳೆ. ಹಾಗಾದರೆ, ಚೈತ್ರಾ ಕುಂದಾಪುರ ಅವರದ್ದೇ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆಯವರು 55 ವರ್ಷವಾದರೂ ವಿವಾಹವಾಗಿಲ್ಲವೆಂದು ಯಾಕೆ ಪ್ರಶ್ನಿಸಿಲ್ಲ ಎಂದು ಶಕುಂತಲಾ ಶೆಟ್ಟಿ ಟಾಂಗ್ ನೀಡಿದರು.
ಚೈತ್ರಾ ಕುಂದಾಪುರ ಬೊಟ್ಟು ಮಾಡಿರುವ ಯುವತಿಯು ಸುರತ್ಕಲ್ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಹಾಗೂ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸಮುದಾಯದರು. ಹಾಗಾದರೆ, ಚೈತ್ರಾ ಕುಂದಾಪುರ ಅವರು ಆ ಬಂಟ ಸಮುದಾಯದ ಯುವತಿಯನ್ನು ಪ್ರೀತಿ ಮಾಡಿರುವ ಮುಸ್ಲಿಂ ಯುವಕ ಯಾರು? ಎಂದು ತೋರಿಸಿಕೊಡಿ ಎಂದು ಸವಾಲು ಹಾಕುತ್ತೇನೆ. ಅದಾಗದಿದ್ದಲ್ಲಿ ಸಾರ್ವಜನಿಕವಾಗಿ ಇಡೀ ದ.ಕ ಜಿಲ್ಲೆಯ ಹೆಣ್ಣು ಮಕ್ಕಳ ಬಗ್ಗೆ ಕ್ಷಮೆ ಯಾಚನೆ ಮಾಡಿ. ಅದೇ ರೀತಿ ಚೈತ್ರಾ ಕುಂದಾಪುರ ಅವರೂ ಹೆಣ್ಣು. ಆಕೆ ಯಾವಾಗ? ಎಷ್ಟು ವರ್ಷದ ಒಳಗೆ ಮದುವೆಯಾಗಲಿದ್ದಾರೆ ಅದನ್ನೂ ತಿಳಿಸಲಿ ಎಂದು ಕಿಡಿ ಕಾರಿದರು.
ಕುಂದಾಪುರದ ಚೈತ್ರಾ ಅವರಿಗೆ ಸುರತ್ಕಲ್ನ ಯುವತಿ ಮುಸ್ಲಿಂ ಯುವಕನನ್ನು ಪ್ರೀತಿ ಮಾಡುವ ವಿಚಾರ ತಿಳಿಯುವುದು ಹೇಗೆ?. ಆದ್ದರಿಂದ ನಿಮಗೆ ಇದನ್ನು ಹೇಳಿಕೊಟ್ಟವರು ಯಾರು? ಎಂದು ಮೊದಲು ತಿಳಿಸಿ. ಅವರ ಹಣೆಬರಹವೂ ನಮಗೆ ತಿಳಿಯುತ್ತದೆ. ಸೀತಾ ಸಾವಿತ್ರಿ, ಗೀತಾ ಗಾಯತ್ರಿ ಇದ್ದ ಈ ದೇಶದಲ್ಲಿ ಲಂಕಿಣಿ ಶೂರ್ಪನಖಿಯರೂ ಇದ್ದರು. ನೀವು ಯಾವ ಪಂಗಡಕ್ಕೆ ಸೇರಿದವರೆಂದು ಮೊದಲು ತಿಳಿಸಿ. ಚೈತ್ರಾ ಕುಂದಾಪುರ ಅವರಿಗೆ ಇಂತಹ ಹಿಂದೂ ಪಾಠ ಯಾರು ಮಾಡಿದ್ದು?. ಯಾವ ಸಂಘಟನೆ ಮಾಡಿದ್ದು ಎಂದು ಪ್ರಶ್ನಿಸಿದರು.