ಮಂಗಳೂರು: ಬಿಜೆಪಿ ಸರ್ವಾಧಿಕಾರಿ ಆಡಳಿತ ನಡೆಸುವ ಇಚ್ಛೆಯನ್ನು ಸ್ಥಳೀಯಾಡಳಿತದಲ್ಲೂ ತೋರಿಸುತ್ತಿದೆ. ರಾಜ್ಯ, ದೇಶದಲ್ಲಿ ಬಿಜೆಪಿ ನಡೆಸುತ್ತಿರುವ ಸರ್ವಾಧಿಕಾರ ಧೋರಣೆ ಮಂಗಳೂರು ನಗರ ಪಾಲಿಕೆ ಆಡಳಿತದಲ್ಲೂ ಕಂಡು ಬಂದಿದೆ ಎಂದು ಮಾಜಿ ಶಾಸಕ ಜೆ.ಆರ್.ಲೋಬೊ ಆರೋಪಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡುತ್ತಾ, ಬಿಜೆಪಿಯಿಂದ ನಡೆಯುತ್ತಿರುವ ಅವ್ಯವಹಾರ, ಭ್ರಷ್ಟಾಚಾರವನ್ನು ಜವಾಬ್ದಾರಿಯುತ ಪ್ರತಿಪಕ್ಷಗಳು ಎತ್ತಿ ತೋರಿಸಬಾರದೆಂದು ಇಚ್ಛೆಯಿಂದ ಮಂಗಳೂರು ಮನಪಾ ಆಡಳಿತದಲ್ಲಿ ಕಾಂಗ್ರೆಸ್ಗೆ ವಿಪಕ್ಷ ನಾಯಕನ ಸ್ಥಾನ ನೀಡಲು ಬಿಜೆಪಿ ನಿರಾಕರಿಸಿದೆ ಎಂದು ಹೇಳಿದರು.
ಬಿಜೆಪಿ ಇದೀಗ ಮಂಗಳೂರು ಮನಪಾದಲ್ಲಿ ವಿಪಕ್ಷ ಸ್ಥಾನ ನೀಡಲು ನಿರಾಕರಿಸಿರುವ ಎ.ಸಿ.ವಿನಯ್ ರಾಜ್ ರವರ ಹೆಸರನ್ನು ಕಳೆದ ವರ್ಷ ಸ್ಮಾರ್ಟ್ ಸಿಟಿ ಬೋರ್ಡ್‌ಗೆ ಸೂಚಿಸಲಾಗಿತ್ತು. ಮೇಯರ್ ಅವರಿಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಪತ್ರ ಬರೆದಿದ್ದರು. ಅದನ್ನು ಬಿಜೆಪಿ ಪರಿಗಣಿಸಿರಲಿಲ್ಲ. ಬೇಕಾಬಿಟ್ಟಿಯಾಗಿ ಅವರು ನಿರ್ಧಾರ ಕೈಗೊಂಡಿದ್ದರು. ಆದ್ದರಿಂದ ಇಂದು ಕಾಂಗ್ರೆಸ್ ನ ಜಿಲ್ಲಾಧ್ಯಕ್ಷರು ಮಂಗಳೂರು ಮನಪಾ ಆಯುಕ್ತರಿಗೆ ಪತ್ರ ಬರೆದು ಮನಪಾದ ವಿಪಕ್ಷ ನಾಯಕರಾಗಿ ಎ.ಸಿ.ವಿನಯ್ ರಾಜ್ ಅವರನ್ನು ಪರಿಗಣಿಸಬೇಕೆಂದು ಪತ್ರ ಬರೆದಿರೋದರಲ್ಲಿ ಏನು ತಪ್ಪಿದೆ ಎಂದು ಲೋಬೊ ಪ್ರಶ್ನಿಸಿದರು.
ಆಡಳಿತ ಪಕ್ಷ ಆಡಳಿತ ನಡೆಸುವ ಸಂದರ್ಭದಲ್ಲಿ ಪ್ರತಿಪಕ್ಷ ಸಕಾರಾತ್ಮಕವಾಗಿ ಸಹಕಾರ ನೀಡಿ ಆಡಳಿತ ನಡೆಸಲು ಸಲಹೆ ನೀಡುತ್ತಾರೋ, ಆಗ ಮಾತ್ರ ಉತ್ತಮ ಆಡಳಿತ ನಡೆಸಲು ಸಾಧ್ಯ. ಆಡಳಿತ ಪಕ್ಷಕ್ಕೆ ಎಷ್ಟು ಜವಾಬ್ದಾರಿ ಇದೆಯೋ, ಅಷ್ಟೇ ಆಡಳಿತ ಪಕ್ಷಕ್ಕೂ ಜವಾಬ್ದಾರಿ ಇದೆ. ಈ ಹಿಂದೆ ಕಾಂಗ್ರೆಸ್ ಆಡಳಿದಲ್ಲಿದ್ದಾಗ ಪ್ರತಿಪಕ್ಷಕ್ಕಿರುವ ಗೌರವವನ್ನು ನೀಡಿ ಆಡಳಿತವನ್ನು ನಡೆಸಿತ್ತು. ಆದ್ದರಿಂದ ಹಿಂದೆ ಬಿಜೆಪಿಯಲ್ಲಿ 10, 6 ಸ್ಥಾನಗಳು ಇದ್ದಾಗ ಕೂಡಾ ಪ್ರತಿಪಕ್ಷದ ಸ್ಥಾನ ನೀಡಿದೆ. ಗೌರವವನ್ನು ಕಂಡಿದೆ. ಆದರೆ ಇಂದು ಬಿಜೆಪಿ ಇದಾವುದನ್ನು ಗಣನೆಗೆ ತೆಗೆದುಕೊಳ್ಳದೆ ವಿಪಕ್ಷ ನಾಯಕನ ಸ್ಥಾನವನ್ನು ಕೈಬಿಡುವ ಆಲೋಚನೆ ಮಾಡುತ್ತಿದೆ.
ಇಂತಹ ಬೇಜವಾಬ್ದಾರಿತನದ ಆಡಳಿತವನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಇಂದು ಮನಪಾದಲ್ಲಿ ಪ್ರತಿಪಕ್ಷ ಸ್ಥಾನ ಇಲ್ಲ ಎಂದು ಅಗೌರವ ತೋರಿದ್ದಾರೆ. ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ ಗೆ ಮಾಡಿರುವ ಅಗೌರವ, ನಮ್ಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಮಾಡಿರುವ ಅಗೌರವ ಎಂದು ತಿಳಿದು ಇದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಜೆ.ಆರ್.ಲೋಬೊ ಎಚ್ಚರಿಸಿದ್ದಾರೆ.