ಮಂಗಳೂರು : ಉಡುಪಿಯ ಕಾಲೇಜಿನಲ್ಲಿ ಸ್ಕಾರ್ಫ್ ಧರಿಸುವ ವಿಚಾರದಲ್ಲಿ ಉಂಟಾಗಿರುವ ವಿವಾದದ ಹಿನ್ನೆಲೆಯಲ್ಲಿ ಪಾಕಿಸ್ತಾನ ಟ್ವೀಟ್ ಮಾಡುವ ಅಗತ್ಯವಿಲ್ಲ. ನಾವು ಇಲ್ಲಿ ಸುರಕ್ಷಿತರಾಗಿದ್ದೇವೆ ಎಂದು ಮಾಜಿ ಸಚಿವ ಯು ಟಿ ಖಾದರ್ ಅವರು ವೈರಿ ರಾಷ್ಟ್ರಕ್ಕೆ ಖಡಕ್ ಸಂದೇಶ ರವಾನಿಸಿದ್ದಾರೆ.
ಮಾಜಿ ಸಚಿವ ಯು ಟಿ ಖಾದರ್ ಸುದ್ದಿಗೋಷ್ಠಿ ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ಕಾರ್ಫ್ ವಿವಾದ ಸ್ಥಳೀಯ ವಿಚಾರ. ಇದನ್ನು ವಿದ್ಯಾರ್ಥಿನಿಯರ ಪೋಷಕರು, ಕಾಲೇಜಿನ ಪ್ರಾಂಶುಪಾಲರು ಬಗೆಹರಿಸಬೇಕು. ಯಾವುದೇ ವಿಚಾರದಿಂದ ವಿದ್ಯಾರ್ಥಿಗಳ ಶಿಕ್ಷಣ ಮೊಟಕಾಗದಂತೆ ಹೆತ್ತವರು ಮತ್ತು ಕಾಲೇಜಿನ ಪ್ರಾಂಶುಪಾಲರು ನೋಡಿಕೊಳ್ಳಬೇಕು. ದ್ವೇಷದಿಂದ ಪರಿಹಾರ ಸಿಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕು. ಈ ವಿಚಾರವನ್ನು ಪಾಕಿಸ್ತಾನ ಟ್ವೀಟ್ ಮಾಡುವ ಅಗತ್ಯವಿಲ್ಲ. ಇಲ್ಲಿಯವರು ಸುರಕ್ಷಿತ ಇದ್ದಾರೆ. ಪಾಕಿಸ್ತಾನದಲ್ಲಿ ಶಾಲೆಗೆ ಹೋಗುವಾಗ ಗುಂಡು ಹೊಡೆದದ್ದು ನೋಡಿದ್ದೇವೆ ಎಂದು ಟಾಂಗ್ ಕೊಟ್ಟರು.
ನಾರಾಯಣ ಗುರು ಟ್ಯಾಬ್ಲೋವನ್ನು ಗಣರಾಜ್ಯೋತ್ಸವದ ಪರೇಡ್ನಲ್ಲಿ ತಿರಸ್ಕರಿಸುವ ಮೂಲಕ ಕೇಂದ್ರ ಸರ್ಕಾರ ನಾರಾಯಣ ಗುರುಗಳ ತತ್ವವನ್ನು ತಿರಸ್ಕರಿಸಿದೆ. ನಾರಾಯಣ ಗುರುಗಳ ಬದಲಿಗೆ ಶಂಕರಾಚಾರ್ಯರ ಮೂರ್ತಿ ಇಡಲು ಹೇಳುವುದರ ಅರ್ಥವೇನು. ಹಣದಿಂದ ತಪ್ಪನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂದು ಟೀಕಿಸಿದರು.
ಉಳ್ಳಾಲಬೈಲ್ ಜಾತ್ರೆಯಲ್ಲಿ ಬ್ಯಾನರ್ ವಿವಾದ :
ಉಳ್ಳಾಲಬೈಲ್ ಜಾತ್ರೆಯಲ್ಲಿ ಬ್ಯಾನರ್ ವಿವಾದ ಇನ್ನೂ ಉಳ್ಳಾಲ ಬೈಲ್ ಜಾತ್ರೆಯಲ್ಲಿ ಹಾಕಲಾದ ಬ್ಯಾನರ್ವೊಂದು ವಿವಾದಕ್ಕೆ ಕಾರಣವಾಗಿದೆ. ಉಳ್ಳಾಲ ಬೈಲ್ ನ ಜಾತ್ರೆ ನಡೆಯುತ್ತಿದ್ದು, ನಿನ್ನೆ ರಾತ್ರಿ ಬ್ಯಾನರ್ ವೊಂದು ಕಾಣಿಸಿಕೊಂಡಿದೆ. ಅದರಲ್ಲಿ " ನೀವು ನೀಡುವ ವ್ಯಾಪಾರ ದೈವ ದೇವರುಗಳ ಪಾವಿತ್ರ್ಯತೆ ಹಾಳುಮಾಡುವ, ಅಪಹಾಸ್ಯ ಮಾಡುವ ಸಮಾಜಕ್ಕೆ ಆಗದಿರಲಿ. ದೇವರನ್ನು ಪೂಜಿಸುವ ಹಿಂದೂ ಬಾಂಧವರಿಗೆ ಆಗಲಿ. ಈ ನೆಲದ ದೈವ ದೇವರುಗಳನ್ನು ಪೂಜಿಸುವವರಿಗೆ ಮಾತ್ರ ಇಲ್ಲಿ ವ್ಯಾಪಾರ ಮಾಡಲು ಅವಕಾಶ ಎಂದು ಬರೆಯಲಾಗಿದೆ.
ಒಂದು ಬ್ಯಾನರ್ನಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಶ್ರೀ ವೈದ್ಯನಾಥ ಛತ್ರಪತಿ ಶಾಖೆ, ಉಳ್ಳಾಲಬೈಲ್ ಎಂದು ಬರೆಯಲಾಗಿದೆ, ಮತ್ತೊಂದರಲ್ಲಿ ಹಿಂದೂ ಭಾಂದವರು, ಉಳ್ಳಾಲಬೈಲ್ ಎಂದು ಬರೆಯಲಾಗಿದೆ. ಬ್ಯಾನರ್ ಹಾಕಿರುವ ವಿಚಾರ ತಿಳಿದ ಬೆನ್ನಿಗೆ ಇದನ್ನು ರಾತ್ರಿಯೆ ತೆರವುಗೊಳಿಸಲಾಗಿದೆ. ಆದರೆ ಇದರ ಪೊಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಬಗ್ಗೆ ಪ್ರತಿಕ್ರೀಯಿಸಿರುವ ಶಾಸಕ, ಮಾಜಿ ಸಚಿವ ಯು ಟಿ ಖಾದರ್, ಈ ರೀತಿ ಸಮಾಜದಲ್ಲಿ ದ್ವೇಷ ಹುಟ್ಟಿಸುವವವರ ವಿರುದ್ಧ ಪೊಲೀಸರು ಕ್ರಮಕೈಗೊಳ್ಳಬೇಕು. ಉಳ್ಳಾಲಬೈಲಿನಲ್ಲಿ ಎಲ್ಲರೂ ಒಟ್ಟಾಗಿಯೆ ಹೊರಗಿನಿಂದ ಬಂದವರು ಸಮಾಜದಲ್ಲಿ ಅಶಾಂತಿ ಮುಟ್ಟಿಸುವ ಕಾರ್ಯ ಮಾಡುತ್ತಿದ್ದಾರೆ. ಇಂತಹ ಬ್ಯಾನರ್ ಹಾಕಿದವರ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿ ಪೊಲೀಸರು ಕ್ರಮಕೈಗೊಳ್ಳಬೇಕು. ಈ ಬ್ಯಾನರ್ ಗಳನ್ನು ಮುದ್ರಿಸಿದವರ ಲೈಸೆನ್ಸ್ ರದ್ದು ಪಡಿಸುವ ಕಾರ್ಯವನ್ನು ಮಾಡಬೇಕು ಎಂದು ಒತ್ತಾಯಿಸಿದರು.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ