ಮಂಗಳೂರು:''ಗ್ಯಾರಂಟಿ ಅನುಷ್ಠಾನದ ಮೂಲಕ ಬಡವರಿಗೆ 10 ಕೆಜಿ ಅಕ್ಕಿ ಕೊಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದ್ದರೆ, ಕೇಂದ್ರ ಸರಕಾರ ಬಡವರ ಅನ್ನಕ್ಕೆ ಕಲ್ಲು ಹಾಕುವ ಕೆಲಸ ಮಾಡುತ್ತಿದೆ'' ಎಂದು ಮಾಜಿ ಸಚಿವ ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದರು. ನಗರದ ಮಲ್ಲಿಕಟ್ಟೆಯಲ್ಲಿರುವ ದ.ಕ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ''ಎಫ್‌ಸಿಐ ರಾಜ್ಯಗಳಿಗೆ ಅಕ್ಕಿಯನ್ನು ವಿತರಣೆಯನ್ನು ಮಾಡುತ್ತದೆ. ಇದಕ್ಕೆ ರಾಜ್ಯ ಸರ್ಕಾರ ಪತ್ರ ಬರೆದ ವೇಳೆ ಅವರು ಒಪ್ಪಿಗೆಯನ್ನೂ ನೀಡಿದ್ದರು. ಆದರೆ, ಕೇಂದ್ರ ಸರ್ಕಾರ ಅದಕ್ಕೆ ತಡೆಯೊಡ್ಡುತ್ತಿದೆ. ಈ ರೀತಿಯ ಅಡ್ಡಿ ಬಡವರಿಗೆ ಮಾಡುವ ದ್ರೋಹ. ಕೇಂದ್ರದ ಇಂತಹ ನಿಲುವು ಖಂಡನೀಯ'' ಎಂದು ತಿಳಿಸಿದರು.
''ಮೊದಲಿಗೆ ಬಿಜೆಪಿ ರಾಜ್ಯ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿರುವ ಭರವಸೆಯನ್ನು ಈಡೇರಿಸುವುದಿಲ್ಲ ಅಂದಿದ್ದರು. ಬಳಿಕ ಕೇಂದ್ರದಿಂದ ಅಕ್ಕಿ ಕೊಡಲು ಎಫ್‌ಸಿಐ ಒಪ್ಪಿಗೆ ಪತ್ರ ಕೊಡಿ ಎಂದ ಅವರು, ಸಿಎಂ ಒಪ್ಪಿಗೆ ಪತ್ರವನ್ನೂ ತೋರಿಸಿದ್ದಾರೆ. ಆದರೂ ಅಕ್ಕಿ ಕೊಡುವುದನ್ನು ತಡೆಹಿಡಿದಿದ್ದಾರೆ. ಬಡವರ ಅನ್ನಕ್ಕೆ ಕಲ್ಲು ಹಾಕಬೇಡಿ. ತಕ್ಷಣ ಅಕ್ಕಿ ಬಿಡುಗಡೆ ಮಾಡಿ'' ಎಂದು ಆಗ್ರಹಿಸಿದರು.
''ಇಡೀ ದೇಶದಲ್ಲಿ ಬಡವರಿಗೆ ಧರ್ಮಾರ್ಥ ಅಕ್ಕಿ ನೀಡಲು ಶುರು ಮಾಡಿದ್ದು ಸಿದ್ದರಾಮಯ್ಯರ ಕಾಂಗ್ರೆಸ್ ಸರಕಾರ. ಉಚಿತ ನೀಡಿದರೆ ದೇಶ ದಿವಾಳಿಯಾಗುತ್ತದೆ ಎನ್ನುವವರು ಈಗ ಕೊಡಿ ಎಂದು ಹೇಳುತ್ತಿದ್ದಾರೆ. ಒಂದು ಹಿಡಿ ಅಕ್ಕಿಯೂ ಕಡಿಮೆ ಮಾಡಬಾರದು ಎಂದು ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ. ಎಫ್ಸಿಐನಲ್ಲಿ ಅಕ್ಕಿ ಸಾಕಷ್ಟು ದಾಸ್ತಾನಿದ್ದರೂ ಕೊಡುತ್ತಿಲ್ಲ. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ದೃಷ್ಟಿಯಲ್ಲಿ ತಡೆ ಮಾಡುವುದು ಸರಿಯಾ? ಆದರೂ ನಾವು ಅದನ್ನು ಈಡೇರಿಸ್ತೇವೆ'' ಎಂದರು.
''ಬಡವರ ಅನ್ನಕ್ಕೆ ಕಲ್ಲು ಹಾಕುವವರಿಗೆ ಜನರೇ ತಕ್ಕ ಪಾಠವನ್ನು ಕಲಿಸುತ್ತಾರೆ. ಕೇಂದ್ರದಲ್ಲಿ ಬಡವರಿಗೆ ಅಕ್ಕಿ ನೀಡುವ ಯೋಜನೆಗೆ ಅಡ್ಡಿಪಡಿಸಿರುವ ಬಿಜೆಪಿ ನೇತೃತ್ವದ ಕೇಂದ್ರದ ಎನ್ಡಿಎ ಸರಕಾರದ ವಿರುದ್ಧ ಅನ್ನದ ಬಟ್ಟಲು ಬಡಿದು ಎಚ್ಚರಿಕೆ ನೀಡುವ ಮೂಲಕ ಮಂಗಳವಾರ ನಡೆಯುವ ಪ್ರತಿಭಟನೆಯಲ್ಲಿ ತಾನು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಳ್ಳುವುದು'' ಎಂದು ತಿಳಿಸಿದ್ದಾರೆ.