ಮಂಗಳೂರು: ಬಡ ಮಹಿಳೆಯೋರ್ವರಿಗೆ ಆಯುಷ್ಮಾನ್ ಕಾರ್ಡ್ನಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿ, 11 ಲಕ್ಷ ರೂ. ದುಬಾರಿ ಬಿಲ್ ಮಾಡಿದ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ವಿರುದ್ಧ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿರುವ ಅವರು, ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ನಗರದ ಮುಲ್ಕಿ ನಿವಾಸಿ ಬಡ ಮಹಿಳೆಯ ಚಿಕಿತ್ಸಾ ವೆಚ್ಚದ ಬಗ್ಗೆ ದ.ಕ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಶೀಘ್ರ ಸ್ಪಂದಿಸಬೇಕು ಎಂದು ಅವರು ಆಗ್ರಹಿಸಿದರು.
ಮುಲ್ಕಿ ಪಂಜಿನಡ್ಕದ ರೇವತಿ ಆಚಾರ್ಯ ಎಂಬವರು ಮೆದುಳಿನ ಗೆಡ್ಡೆ (ಬ್ರೈನ್ ಟ್ಯೂಮರ್) ಶಸ್ತ್ರಚಿಕಿತ್ಸೆ ಗಾಗಿ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಶಸ್ತ್ರಚಿಕಿತ್ಸೆ ಮಾಡಲು 3 ಲಕ್ಷ ರೂ. ಖರ್ಚಾಗಲಿದೆ ಎಂದು ಆಸ್ಪತ್ರೆಯವರು ತಿಳಿಸಿದಾಗ ಮನೆಯವರು ಒಪ್ಪಿದ್ದಾರೆ. ಬಳಿಕ ಕೊರೊನಾ ಪರೀಕ್ಷೆ ನಡೆಸಿ ಮೊದಲು ನೆಗೆಟಿವ್, ನಂತರ ಪಾಸಿಟಿವ್ ಎಂದೆಲ್ಲಾ ಹೇಳುತ್ತಾರೆ. ಇದೆಲ್ಲಾ ಆಗಿ ಶಸ್ತ್ರಚಿಕಿತ್ಸೆ ಮುಗಿದು ರೇವತಿ ಗುಣಮುಖರಾದ ಬಳಿಕ 3 ಲಕ್ಷ ರೂ. ಹೇಳಿದ್ದ ಆಸ್ಪತ್ರೆಯವರು ವರಸೆ ಬದಲಿಸಿ 11.34 ಲಕ್ಷ ರೂ. ಬಿಲ್ ನೀಡಿದ್ದಾರೆ. ಇದರಿಂದ ರೇವತಿ ಆಚಾರ್ಯರ ಕುಟುಂಬಸ್ಥರು ಕಂಗಾಲಾಗಿ ಹೋಗಿದ್ದಾರೆ. ಕುಟುಂಬಸ್ಥರು ನಮ್ಮಲ್ಲಿ ಬಿಪಿಎಲ್ ಕಾರ್ಡ್ ಇದ್ದು ಚಿಕಿತ್ಸಾ ವೆಚ್ಚವನ್ನು ಹೊಂದಿಸಿಕೊಳ್ಳಲು ಕೇಳಿಕೊಂಡರೆ `ಅದೆಲ್ಲಾ ನಮ್ಮಲ್ಲಿ ಇಲ್ಲ, ಬಿಲ್ ಪಾವತಿಸಿ ಹೋಗಿಎನ್ನುವಂತೆ ನಿರಾಕರಿಸಿದ್ದಾರೆ ಎಂದು ಅಭಯಚಂದ್ರ ಜೈನ್ ಆರೋಪಿಸಿದ್ದಾರೆ.
ಕೆಎಂಸಿಯವರ ದುಬಾರಿ ಬಿಲ್ನಿಂದ ಕಂಗಾಲಾದ ಬಡಕುಟುಂಬ ಹಲವರಲ್ಲಿ ಸಹಾಯ ಕೇಳಿದೆ. ಈ ಬಡ ಮಹಿಳೆಯ ಕುಟುಂಬಕ್ಕಾದ ಅನ್ಯಾಯದ ಬಗ್ಗೆ ಅತಿಕಾರಿಬೆಟ್ಟು ಗ್ರಾಪಂ ಮಾಜಿ ಅಧ್ಯಕ್ಷೆ ಶಾರದಾ ಪೂಜಾರಿ ಹಾಗೂ ಸಮಾಜ ಸೇವಕಿ ಟಿ. ಎ. ಸವಿತಾ ಬಾಯಾರು ಅವರು ನನ್ನ ಗಮನಕ್ಕೆ ತಂದಿದ್ದಾರೆ. ಆಯುಷ್ಮಾನ್ ಕಾರ್ಡ್ ಹೊಂದಿದವರಿಗೆ ಚಿಕಿತ್ಸಾ ವೆಚ್ಚವನ್ನು ಸರ್ಕಾರದ ವತಿಯಿಂದಲೇ ಭರಿಸಲಾಗುತ್ತದೆ ಎಂದು ಹೇಳಿದ್ದರೂ ಖಾಸಗಿ ಆಸ್ಪತ್ರೆಯಲ್ಲಿ ದುಬಾರಿ ವೆಚ್ಚದ ಬಿಲ್ ನೀಡಿ ಉಚಿತ ಚಿಕಿತ್ಸೆ ನಿರಾಕರಿಸುತ್ತಿರುವುದು ಸರಿಯಲ್ಲ. ಇದಕ್ಕೆ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯ ಅಧಿಕಾರಿಯವರು ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎಂದು ಅಭಯಚಂದ್ರ ಜೈನ್ ಆಗ್ರಹಿಸಿದ್ದಾರೆ.