ಮಂಗಳೂರು:ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅನುಷ್ಠಾನಗೊಳಿಸಿದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯನ್ನು ಪೂರ್ಣವಾಗಿ ತೆಗೆದುಹಾಕಲು ಈಗಿನ ಸರ್ಕಾರದಿಂದ ಸಾಧ್ಯವಿಲ್ಲ. ಎನ್‌ಇಪಿ ಬದಲು ಎಸ್‌ಇಪಿ ಎಂದು ಹೆಸರನ್ನು ಮಾತ್ರ ಬದಲಾಯಿಸಬಹುದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ನಗರದ ಡೊಂಗರಕೇರಿಯ ಕೆನರಾ ಹೈಸ್ಕೂಲಿನ ಭುವನೇಂದ್ರ ಸಭಾಂಗಣದಲ್ಲಿ ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಶನ್ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ 'ರಾಷ್ಟ್ರೀಯ ಶಿಕ್ಷಣ ನೀತಿ-2020' ಕುರಿತ ಶಿಕ್ಷಣ ತಜ್ಞರ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು. ಎನ್‌ಇಪಿಯಲ್ಲಿ ತೆಗೆದು ಹಾಕುವಂತಹ ವಿಷಯಗಳು ಏನೂ ಇಲ್ಲ. ಯಾವ ಅಂಶವನ್ನು ತೆಗೆದು ಹಾಕಬೇಕು ಎಂಬ ಬಗ್ಗೆ ಸರ್ಕಾರಕ್ಕೆ ಸ್ಪಷ್ಟತೆಯೂ ಇಲ್ಲ. ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಮಕ್ಕಳು ಕೂಡ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಪಡೆಯಬೇಕು ಎಂಬ ಉದ್ದೇಶದಿಂದ ಎನ್‌ಇಪಿಯನ್ನು ವ್ಯವಸ್ಥಿತವಾಗಿ ರೂಪಿಸಲಾಗಿದೆ ಎಂದು ತಿಳಿಸಿದರು.
ಎನ್‌ಇಪಿಯನ್ನು ಬದಲಾಯಿಸುವ ಮೂಲಕ ರಾಜ್ಯದಲ್ಲಿ ಬಡವರ ಮಕ್ಕಳ ಶಿಕ್ಷಣಕ್ಕೆ ಹೊಡೆತ ನೀಡಲು ಸರ್ಕಾರ ಮುಂದಾಗಿದೆ. ಇದರಿಂದ ಸಿಬಿಎಸ್‌ಇ, ಐಸಿಎಸ್‌ಇ ಪಠ್ಯಕ್ರಮದ ಶಿಕ್ಷಣ ಪಡೆಯುವ ಶ್ರೀಮಂತರ ಮಕ್ಕಳಿಗೆ ತೊಂದರೆಯಾಗುವುದಿಲ್ಲ. ಎನ್‌ಇಪಿ ರದ್ದುಗೊಳಿಸಿದರೆ, ಬಡವರ ಭವಿಷ್ಯಕ್ಕೆ ತೊಂದರೆಯಾಗಲಿದೆ ಎಂದು ಸರ್ಕಾರಕ್ಕೆ ಅರ್ಥವಾಗಬೇಕು ಎಂದು ಹೇಳಿದರು.
ಪತ್ರಕರ್ತ ರವೀಂದ್ರ ರೇಷ್ಮೆ ಮಾತನಾಡಿ ಎನ್‌ಇಪಿಗೆ ಕಂಟಕ ಎದುರಾಗಿದೆ. ಈಗಿರುವ ಶಿಕ್ಷಣ ನೀತಿಗೂ ಶಿಕ್ಷಕ ವೃತ್ತಿಗೂ ಸಂಬಂಧ ಇಲ್ಲದಂತೆ ಆಗಿದೆ. ಎನ್‌ಇಪಿ ಉಳಿಸುವಂತೆ ಒತ್ತಾಯಿಸಿ ಶಿಕ್ಷಕರು, ಪಾಲಕರು, ಮಕ್ಕಳು ಒಟ್ಟಾಗಿ ಹೋರಾಟ ಮಾಡಬೇಕಾಗಿದೆ ಎಂದರು. ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶಾಸಕರಾದ ಡಾ. ಸಿ.ಎನ್.ಅಶ್ವತ್ಥ ನಾರಾಯಣ, ಡಾ. ಭರತ್ ಶೆಟ್ಟಿ, ಭಾಗೀರಥಿ ಮುರುಳ್ಳ, ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಉಪಸ್ಥಿತರಿದ್ದರು.
ಶಿಕ್ಷಣ ನೀತಿ ರೂಪಿಸಲು ಸಮಿತಿ ರಚನೆ: "ಶಿಕ್ಷಣ ನೀತಿ ನಿರೂಪಣೆ ರಾಜ್ಯದ ವಿಷಯ. ಈ ಹಿನ್ನೆಲೆಯಲ್ಲಿ ಹಳೆ ಶಿಕ್ಷಣ ಪದ್ಧತಿ ಮುಂದುವರೆಸಿ, ಹೊಸ ಶಿಕ್ಷಣ ನೀತಿ ರೂಪಿಸಲು ಒಂದು ಸಮಿತಿ ರಚಿಸಲಾಗುವುದು" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದರು. ಇತ್ತೀಚೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಶಿಕ್ಷಣ ನೀತಿ ಕುರಿತಂತೆ ನಡೆಸಲಾದ ಸಭೆಯಲ್ಲಿ ಈ ವಿಷಯ ತಿಳಿಸಿದ್ದರು.
"ಶಿಕ್ಷಣಕ್ಕೆ ಕೇಂದ್ರ ಸರ್ಕಾರ ನೀತಿ ರೂಪಿಸಲು ಸಾಧ್ಯವಿಲ್ಲ. ಏಕೆಂದರೆ ಅದು ರಾಜ್ಯದ ವಿಷಯ. ರಾಜ್ಯ ಸರ್ಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಲಾಗಿದೆ. ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಮೇಲೆ ಹೇರಲಾಗದು. ಹೀಗೆ ಹೇರಲು ಹೊರಟಿರುವುದು ಒಂದು ಹುನ್ನಾರ. ಬಹು ಸಂಸ್ಕೃತಿ, ಬಹುತ್ವ ಇರುವ ದೇಶದಲ್ಲಿ ಏಕರೂಪದ ಶಿಕ್ಷಣ ವ್ಯವಸ್ಥೆ ಮಾಡಲಾಗದು. ಆದ್ದರಿಂದ ಹಳೆ ಶಿಕ್ಷಣ ಪದ್ಧತಿ ಮುಂದುವರೆಸಿ, ಹೊಸ ಶಿಕ್ಷಣ ನೀತಿ ರೂಪಿಸಲು ಒಂದು ಸಮಿತಿ ರಚಿಸಲಾಗುವುದು" ಎಂದು ಸಿಎಂ ಹೇಳಿದ್ದರು.
ಇದನ್ನೂ ಓದಿ:ಎನ್‌ಇಪಿ ಬದಲಿಗೆ ಹೊಸ ಶಿಕ್ಷಣ ನೀತಿ ರೂಪಿಸಲು ಸಮಿತಿ ರಚನೆ: ಮುಖ್ಯಮಂತ್ರಿ ಸಿದ್ದರಾಮಯ್ಯ