ಕರ್ನಾಟಕ

karnataka

By

Published : Aug 9, 2023, 9:17 PM IST

ETV Bharat / state

ಕರ್ಣಾಟಕ ಬ್ಯಾಂಕ್​ನ ಮಾಜಿ ಅಧ್ಯಕ್ಷ ಪಿ.ಜಯರಾಮ ಭಟ್ ನಿಧನ

ಕರ್ನಾಟಕ ಬ್ಯಾಂಕ್​ನ ಮಾಜಿ ಅಧ್ಯಕ್ಷರಾದ ಪಿ.ಜಯರಾಮ ಭಟ್​ ನಿಧನರಾಗಿದ್ದಾರೆ.

ಪಿ ಜಯರಾಮ ಭಟ್
ಪಿ ಜಯರಾಮ ಭಟ್

ಮಂಗಳೂರು:ಕರ್ಣಾಟಕ ಬ್ಯಾಂಕ್​ನ ಮಾಜಿ ಅಧ್ಯಕ್ಷ ಪಿ.ಜಯರಾಮ ಭಟ್ ಅವರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕುಸಿದುಬಿದ್ದು ನಿಧನರಾಗಿದ್ದಾರೆ. ಬುಧವಾರ ಮಧ್ಯಾಹ್ನ ಮುಂಬೈನಿಂದ ವಿಮಾನದಲ್ಲಿ ಮಂಗಳೂರಿಗೆ ಬಂದಿದ್ದರು. ಈ ವೇಳೆ ನಿಲ್ದಾಣದಲ್ಲಿ ಕುಸಿದು ಬಿದ್ದ ಅವರನ್ನು ತಕ್ಷಣವೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಮಂಗಳೂರು ಹೊರವಲಯದ ಪೊಳಲಿಯ ಜಯರಾಮ ಭಟ್ ಮಂಗಳೂರು ಮೂಲದ ಕರ್ಣಾಟಕ ಬ್ಯಾಂಕ್‌ನಲ್ಲಿ ಕೆಳಹಂತದಿಂದ ಮೇಲಕ್ಕೇರುತ್ತಾ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಬಡ್ತಿ ಪಡೆದಿದ್ದರು. ಬ್ಯಾಂಕ್ ಚೇರ್ಮನ್ ಆಗಿ ನಿವೃತ್ತಿ ಹೊಂದಿದ್ದರು.

ಪ್ರೊಬೇಷನರಿ ಅಧಿಕಾರಿಯಾಗಿ ಕರ್ನಾಟಕ ಬ್ಯಾಂಕ್ ಸೇರಿದ್ದ ಅವರು, 14 ವರ್ಷಗಳ ಕಾಲ ವಿವಿಧ ಶಾಖೆಗಳಲ್ಲಿ ಸೇವೆ ಸಲ್ಲಿಸಿ 1993ರಲ್ಲಿ ಬ್ಯಾಂಕಿನ ಪ್ರಧಾನ ಕಚೇರಿಗೆ ಮಹಾ ಪ್ರಬಂಧಕರಾಗಿ ಬಡ್ತಿ ಪಡೆದಿದ್ದರು. 2009ರಲ್ಲಿ ಬ್ಯಾಂಕಿನ ಸಿಇಒ ಹುದ್ದೆಗೆ ಬಡ್ತಿ ಪಡೆದು ಸಂಸ್ಥೆಯ ಉನ್ನತಿಗೆ ಕೊಡುಗೆ ನೀಡಿದ್ದರು.

ಜಯರಾಮ್ ಭಟ್ ಜೀವನ ಪರಿಚಯ :1951 ನವೆಂಬರ್ 14ರಂದು ಜನಿಸಿದ್ದ ಪೊಳಲಿ ಜಯರಾಮ ಭಟ್ ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಗಿದ್ದರು. ಪೊಳಲಿ ವಿದ್ಯಾ ವಿಲಾಸ ಶಾಲೆ, ಬೋರ್ಡ್ ಹೈಸ್ಕೂಲ್ ಗುರುಪುರ ಮತ್ತು ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದು, 1972ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂಎಸ್ಸಿ ಪದವಿಯನ್ನು ಮೊದಲ ಶ್ರೇಣಿಯಲ್ಲಿ ಪೂರ್ಣಗೊಳಿಸಿದರು.

1986ರಲ್ಲಿ CAIIB ಪರೀಕ್ಷೆಗೆ ಯಶಸ್ವಿಯಾಗಿ ಹಾಜರಾದ ನಂತರ, 1972ರಲ್ಲಿ ಮೂರು ತಿಂಗಳ ಕಾಲ ಮುಲ್ಕಿಯ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. 1973ರಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಕರ್ನಾಟಕ ಬ್ಯಾಂಕ್ ಲಿಮಿಟೆಡ್‌ಗೆ ಸೇರಿದ ನಂತರ ಬ್ಯಾಂಕಿಂಗ್‌ನಲ್ಲಿ ಅವರ ವೃತ್ತಿಜೀವನ ಪ್ರಾರಂಭವಾಗಿತ್ತು.

1976ರಲ್ಲಿ ಶಾಖೆಯ ವ್ಯವಸ್ಥಾಪಕರಾದರು. 14 ವರ್ಷಗಳ ಕಾಲ ವಿವಿಧ ಶಾಖೆಗಳಲ್ಲಿ ಸೇವೆ ಸಲ್ಲಿಸಿ 1993ರಲ್ಲಿ ಬ್ಯಾಂಕಿನ ಮುಖ್ಯ ಕಚೇರಿಯಲ್ಲಿ ಮುಖ್ಯ ಅಕೌಂಟೆಂಟ್ ಆಗಿ ಬಡ್ತಿ ಪಡೆದಿದ್ದರು. 14 ಜುಲೈ 2009 ರಂದು ಬ್ಯಾಂಕ್‌ನ ಸಿಇಓ ಆಗಿ ನೇಮಕವಾಗಿದ್ದರು. ಬ್ಯಾಂಕಿಂಗ್ ಕಾರ್ಯಾಚರಣೆಗಳ ಎಲ್ಲ ಅಂಶಗಳಲ್ಲಿ ಶ್ರೀಮಂತ ಅನುಭವವನ್ನು ಹೊಂದಿದ್ದು 2007ರಿಂದ 2009 ರವರೆಗೆ ಬ್ಯಾಂಕಿನ ಜಂಟಿ ಉದ್ಯಮವಾದ ಯೂನಿವರ್ಸಲ್ ಸೊಂಪೊ ಜನರಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್‌ನ ಮಂಡಳಿಯಲ್ಲಿದ್ದರು.

ಜಯರಾಮ ಭಟ್ ಅವರು ಆಗಸ್ಟ್ 2010 ರಿಂದ ಆಗಸ್ಟ್ 2014 ರವರೆಗೆ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ​​(IBA) ನಿರ್ವಹಣಾ ಸಮಿತಿಯ ಸದಸ್ಯರಾಗಿದ್ದರು. ಈ ಅವಧಿಯಲ್ಲಿ 'ಸದಸ್ಯ ಖಾಸಗಿ ವಲಯದ ಬ್ಯಾಂಕ್‌ಗಳ IBA ಸಮಿತಿ’ ಅಧ್ಯಕ್ಷರೂ ಆಗಿದ್ದರು. ಸದ್ಯ ಚಿಲ್ಲರೆ ಬ್ಯಾಂಕಿಂಗ್‌ನ IBA ಸ್ಥಾಯಿ ಸಮಿತಿಯ ಸದಸ್ಯರಾಗಿದ್ದರು. ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಅವಧಿಯಲ್ಲಿ, ಬ್ಯಾಂಕ್ ಐಟಿ, ಸಿಎಸ್‌ಆರ್, ಎಂಎಸ್‌ಎಂಇ ಇತ್ಯಾದಿ ಕ್ಷೇತ್ರದಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ:ಜಯರಾಮ್ ಭಟ್ ಮಂಗಳೂರಿನ ಬ್ಯಾಂಕರ್ಸ್ ಕ್ಲಬ್​ನ ಗೌರವಾಧ್ಯಕ್ಷರು. ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಮತ್ತು ಮಂಗಳೂರು ಮ್ಯಾನೇಜ್‌ಮೆಂಟ್ ಅಸೋಸಿಯೇಷನ್‌ನ ಅತ್ಯುತ್ತಮ ವ್ಯವಸ್ಥಾಪಕ ಪ್ರಶಸ್ತಿ ಮತ್ತು ಎ. ಶಾಮರಾವ್ ಸ್ಮಾರಕ ಅತ್ಯುತ್ತಮ ಸಾಧನೆ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ.

ದೆಹಲಿ ಕನ್ನಡಿಗ ಟಿ.ಎ.ಪೈ ಸ್ಮಾರಕ ಶ್ರೇಷ್ಠ ಬ್ಯಾಂಕರ್ ಪ್ರಶಸ್ತಿ, ಏಷ್ಯಾ ಪೆಸಿಫಿಕ್ ಎಚ್‌ಆರ್‌ಎಂ ಕಾಂಗ್ರೆಸ್‌ನಿಂದ ಎಚ್‌ಆರ್ ಓರಿಯಂಟೇಶನ್‌ನೊಂದಿಗೆ ಸಿಇಒ ಮಣಿಪಾಲ್ ವಿಶ್ವವಿದ್ಯಾಲಯ, ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಮತ್ತು ಸಿಂಡಿಕೇಟ್ ಬ್ಯಾಂಕ್ ಜಂಟಿಯಾಗಿ ಹೊಸ ವರ್ಷದ ಪ್ರಶಸ್ತಿ-2015 ನೀಡಿ ಗೌರವಿಸಿದೆ.

ಗ್ರಾಮಸ್ಥರ ಪ್ರಶ್ನೆಗಳ ಮುಂದೆ ಕುಸಿದುಬಿದ್ದ ವೈದ್ಯಾಧಿಕಾರಿ : ಇನ್ನೊಂದೆಡೆ, ಗ್ರಾಮಸ್ಥರ ಪ್ರಶ್ನೆಗಳಿಗೆ ಸಮರ್ಪಕ ಸ್ಪಷ್ಟನೆ ನೀಡಿದರೂ, ಮತ್ತೆ ಮತ್ತೆ ಆರೋಪ ಮಾಡಿದ ಹಿನ್ನೆಲೆಯಲ್ಲಿ ವಿಚಲಿತರಾದ ಮಹಿಳಾ ವೈದ್ಯಾಧಿಕಾರಿಯೋರ್ವರು ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾದ ಘಟನೆ ನೆಲ್ಯಾಡಿ ಸಮೀಪದ ಗೋಳಿತ್ತೊಟ್ಟು ಎಂಬಲ್ಲಿ ನಡೆದಿದೆ.

ಕಡಬ ತಾಲೂಕಿನ ಗೋಳಿತೊಟ್ಟು ಗ್ರಾಮ ಪಂಚಾಯತ್ ಸಭೆಯಲ್ಲಿ ಘಟನೆ ನಡೆದಿದ್ದು, ಗ್ರಾ.ಪಂ. ಅಧ್ಯಕ್ಷ ಜನಾರ್ದನ ಗೌಡ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಸಭೆ ನಡೆದಿತ್ತು. ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯೆದ್ಯಾಧಿಕಾರಿ ಡಾ.ಶಿಶಿರಾ ಕುಸಿದು ಬಿದ್ದವರು. ವೈದ್ಯಾಧಿಕಾರಿಗಳ ಬಳಿ ಎಪ್ರಿಲ್ ತಿಂಗಳಲ್ಲಿ ಇಲ್ಲಿ ಸಾವಿಗೀಡಾದ ವಿದ್ಯಾರ್ಥಿನಿ ಮಮತಾ ಅವರ ಸಾವಿನ ಬಗ್ಗೆ ಗ್ರಾಮಸ್ಥರೋರ್ವರು ಪ್ರಶ್ನೆ ಮಾಡಿದ್ದಾರೆ. ಆಗ ಅವರು ಮಾಹಿತಿ ನೀಡಿದ್ದಾರೆ. ಆದರೂ ಅವರು ಹೇಗೆ ಮೃತರಾದರೆಂದು ನಮಗೆ ಸ್ಪಷ್ಟ ಕಾರಣ ಬೇಕು ಎಂದು ಒತ್ತಾಯಿಸಿದ್ದಾರೆ. ಈ ವೇಳೆ ಅವರು ವಿಚಲಿತರಾಗಿ ಗ್ರಾ.ಪಂ ಕೊಠಡಿಯೊಳಗೆ ತೆರಳುವಾಗ ಕುಸಿದು ಬಿದ್ದಿದ್ದಾರೆ.

ಇದನ್ನೂ ಓದಿ:ಕಲಬುರಗಿ : ಸಾಲಗಾರರ ಕಿರುಕುಳ ಆರೋಪ.. ವ್ಯಕ್ತಿ ಆತ್ಮಹತ್ಯೆ

ABOUT THE AUTHOR

...view details