ಮಂಗಳೂರು: ಆದಾಯಕ್ಕಿಂತ ಅಧಿಕ ಪ್ರಮಾಣದ ಆಸ್ತಿ ಹೊಂದಿರುವ ಆರೋಪದಲ್ಲಿ ಬೆಳ್ತಂಗಡಿ ಸಹ್ಯಾದ್ರಿ ವಲಯ ಅರಣ್ಯಾಧಿಕಾರಿಗೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲಾಗಿದೆ. ಅಧಿಕ ಪ್ರಮಾಣದ ಆಸ್ತಿ ಗಳಿಕೆಯ ಆರೋಪವು ಮೂರನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಆರೋಪಿಗೆ 5 ವರ್ಷಗಳ ಸಾದಾ ಸಜೆ ಮತ್ತು 1.50 ಕೋಟಿ ರೂ. ದಂಡವನ್ನು ವಿಧಿಸಿ ಆದೇಶಿಸಿದ್ದಾರೆ.
ಏನಿದು ಆರೋಪ..?: ಮಂಗಳೂರು ನಗರದ ಕೊಂಚಾಡಿ ನಿವಾಸಿ ಎಸ್.ರಾಘವ ಪಾಟಾಳಿ ಅವರು, ಬೆಳ್ತಂಗಡಿ ಸಹ್ಯಾದ್ರಿ ವಲಯ ಅರಣ್ಯಾಧಿಕಾರಿಯಾಗಿ ಕರ್ತವ್ಯದಲ್ಲಿದ್ದರು. ಇವರು ಆದಾಯಕ್ಕಿಂತ ಅಧಿಕ ಪ್ರಮಾಣದ ಆಸ್ತಿ ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿ ರಾಘವ ವಿರುದ್ಧ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ 2011ರ ಜುಲೈ 21ರಂದು ಪ್ರಕರಣ ದಾಖಲಾಗಿತ್ತು. ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಎಸ್.ಉದಯ್ ಕುಮಾರ್ ಪ್ರಕರಣದ ಫಿರ್ಯಾದುದಾರರಾಗಿದ್ದರು. ಪ್ರಕರಣದ ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ವಿಠಲ್ ದಾಸ್ ಪೈ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ.