ಮಂಗಳೂರು(ದಕ್ಷಿಣ ಕನ್ನಡ) :ಹಾಸ್ಟೆಲ್ನಲ್ಲಿ ನೀಡಿದ ಗೀ ರೈಸ್ ಮತ್ತು ಚಿಕನ್ ಕಬಾಬ್ ತಿಂದ ಬಳಿಕ 137 ವಿದ್ಯಾರ್ಥಿನಿಯರು ಫುಡ್ ಪಾಯಿಸನ್ನಿಂದ ಮಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ನಗರದ ಸಿಟಿ ಆಸ್ಪತ್ರೆಗೆ ಸೇರಿದ ಸಿಟಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದು, ಇವರು ಭಾನುವಾರ ರಾತ್ರಿ ಗೀ ರೈಸ್ ಮತ್ತು ಚಿಕನ್ ಕಬಾಬ್ ಸೇವಿಸಿದ್ದಾರೆ. ಸೋಮವಾರ ಬೆಳಗ್ಗೆ 2 ಗಂಟೆ ಸುಮಾರಿಗೆ ಹಲವು ವಿದ್ಯಾರ್ಥಿನಿಯರಿಗೆ ಅಸ್ವಸ್ಥತೆ ಉಂಟಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಮುಂಜಾನೆಯಿಂದ ರಾತ್ರಿವರೆಗೆ 137 ವಿದ್ಯಾರ್ಥಿನಿಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಲೇಜಿಗೆ ಗೈರಾಗಿದ್ದ 100 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು.. ನಿನ್ನೆ ಸಿಟಿ ನರ್ಸಿಂಗ್ ಕಾಲೇಜಿನ ತರಗತಿಗೆ 100 ಕ್ಕೂ ಅಧಿಕ ವಿದ್ಯಾರ್ಥಿನಿಯರು ಗೈರು ಹಾಜರಾಗಿದ್ದರು. ಅವರು ಯಾಕೆ ಬರಲಿಲ್ಲ ಎಂದು ವಿಚಾರಿಸಿದಾಗ ಫುಡ್ ಪಾಯಿಸನ್ ವಿಚಾರ ಬೆಳಕಿಗೆ ಬಂದಿದೆ. ಈ ವಿಚಾರ ತಿಳಿಯುತ್ತಿದ್ದಂತೆ ರಾತ್ರಿ 8 ಗಂಟೆ ಸುಮಾರಿಗೆ ಸುಮಾರು 400 ರಷ್ಟು ವಿದ್ಯಾರ್ಥಿಗಳು, ಪೋಷಕರು ಸಿಟಿ ಆಸ್ಪತ್ರೆ ಮುಂದೆ ಜಮಾಯಿಸಿದ್ದಾರೆ. ಜನರು ಸೇರಿರುವುದನ್ನು ಪೊಲೀಸ್ ಇಲಾಖೆ ಪರಿಶೀಲಿಸಿದಾಗ ಪುಡ್ ಪಾಯಿಸನ್ ವಿಚಾರ ಬೆಳಕಿಗೆ ಬಂದಿದೆ. ನಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ವಿದ್ಯಾರ್ಥಿನಿಯರಿಗೆ ಗೀರೈಸ್ ಮತ್ತು ಚಿಕನ್ ಕಬಾಬ್ ತಿಂದು ವಾಂತಿಬೇದಿ, ಹೊಟ್ಟೆನೋವು ಕಾಣಿಸಿಕೊಂಡಿದೆ. ಇದರಿಂದ ಅಸ್ವಸ್ಥಗೊಂಡ 137 ವಿದ್ಯಾರ್ಥಿನಿಯರು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರದ ಎ ಜೆ ಆಸ್ಪತ್ರೆಯಲ್ಲಿ 52, ಕೆ ಎಂ ಸಿ ಜ್ಯೋತಿ ಯಲ್ಲಿ 18, ಯುನಿಟಿ ಆಸ್ಪತ್ರೆಯಲ್ಲಿ 14, ಸಿಟಿ ಆಸ್ಪತ್ರೆಯಲ್ಲಿ 8, ಮಂಗಳಾ ಆಸ್ಪತ್ರೆಯಲ್ಲಿ 3 ಮತ್ತು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ 42 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಫುಡ್ ಪಾಯಿಸನ್ ನಿಂದ ಅಸ್ವಸ್ಥತೆಗೊಳಗಾದ ವಿದ್ಯಾರ್ಥಿನಿಯೊಬ್ಬರು ಮಾತನಾಡಿ, 'ಭಾನುವಾರ ರಾತ್ರಿ ಊಟ ಮಾಡಿದ ಬಳಿಕ ನಸುಕಿನ ಜಾವ 2 ಗಂಟೆಗೆ ಹಲವರು ಅನಾರೋಗ್ಯಕ್ಕೀಡಾದೆವು. ಹಾಸ್ಟೆಲ್ ನಲ್ಲಿ ಮೆಸ್ ಫುಡ್ ರೈಸ್ ಮತ್ತು ಚಿಕನ್ ನೀಡಲಾಗಿತ್ತು. ನಾವೆಲ್ಲರೂ ಅಸ್ವಸ್ಥತೆಗೊಳಗಾದ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ವಿವಿಧ ಆಸ್ಪತ್ರೆಗೆ ತೆರಳಿ ಮಾಹಿತಿ ಪಡೆದುಕೊಂಡರು. ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಅವರು ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದಾರೆ' ಎಂದರು.