ಮಂಗಳೂರು :ಕೈಯಲ್ಲಿ ಹಣವಿಲ್ಲದಿದ್ದರೂ ಹಸಿದವರಿಗೆ ಹೋಟೆಲ್ನಲ್ಲಿ ಊಟ ನೀಡುವ ಯೋಜನೆಯೊಂದು ಸದ್ದಿಲ್ಲದೆ ಕಾರ್ಯಾರಂಭ ಮಾಡಿದೆ. ರಾಜ್ಯದ ಏಳು ನಗರಗಳ 12 ಹೋಟೆಲ್ಗಳಲ್ಲಿ ಫುಡ್ ಆನ್ ವಾಲ್ ಎಂಬ ಯೋಜನೆ ನಡೆಯುತ್ತಿದೆ.
ಹೌದು, ಒಪ್ಪೊತ್ತಿನ ಊಟಕ್ಕೆ ಗತಿಯಿಲ್ಲದವರು ಹಸಿವಿನಿಂದ ಇರಬಾರದೆಂದು 'ಫುಡ್ ಆನ್ ವಾಲ್' ಎಂಬ ಯೋಜನೆಯನ್ನು ಆರಂಭಿಸಲಾಗಿದೆ. ಬಡವರ ಹಸಿವು ತಣಿಸುವ ಕಾರ್ಯವನ್ನು ಮಂಗಳೂರಿನ ರೋಹನ್ ಶಿರಿ ಅವರ ನೇತೃತ್ವದ ಯೂನಿವರ್ಸೆಲ್ ನಾಲೆಡ್ಜ್ ಟ್ರಸ್ಟ್ ಆರಂಭಿಸಿದೆ. ಬಡವರ ಹಸಿವು ತಣಿಸಲೆಂದು 'ಫುಡ್ ಆನ್ ವಾಲ್' ವ್ಯವಸ್ಥೆ ಇರುವ ಹೋಟೆಲ್ ಹೊರಗಡೆ ಅಳವಡಿಸಿರುವ ಟೋಕನ್ ತೆಗೆದುಕೊಂಡು ಕೌಂಟರ್ನಲ್ಲಿ ನೀಡಿ ಯಾವುದೇ ಅಂಜಿಕೆಯಿಲ್ಲದೆ ಹೊಟ್ಟೆ ತುಂಬಾ ಊಟ ಮಾಡಬಹುದಾಗಿದೆ.
ಸುಮಾರು ಒಂದು ವರ್ಷದ ಹಿಂದೆ 'ಫುಡ್ ಆನ್ ವಾಲ್' ಎಂಬ ಪರಿಕಲ್ಪನೆ ಹುಟ್ಟಿಕೊಂಡಿತು. ಮಂಗಳೂರಿನ ಚಿಲಿಂಬಿಯ ವಣಸ್, ಬಲ್ಮಠದ ಸಮಕ್ ಡೈನ್, ಕುದ್ರೋಳಿಯ ಕಿಂಗ್ಸ್ ಹೋಟೆಲ್ ಸೇರಿದಂತೆ ಪುತ್ತೂರು, ಕಾರ್ಕಳ, ಬೆಳಗಾವಿ, ಧಾರವಾಡ, ಶಿವಮೊಗ್ಗ, ಬೆಂಗಳೂರಿನ 12 ಹೋಟೆಲ್ಗಳಲ್ಲಿ 'ಫುಡ್ ಆನ್ ವಾಲ್' ವ್ಯವಸ್ಥೆ ಅಳವಡಿಸಲಾಗಿದೆ. ಎಲ್ಲಾ ಹೋಟೆಲ್ಗಳಲ್ಲಿ ದಿನವೊಂದಕ್ಕೆ 15 ಕೂಪನ್ನ ಊಟ ಹೋಗುತ್ತದೆ. ಪ್ರತಿ ಕೂಪನ್ಗೆ ಗರಿಷ್ಠ 50 ರೂ. ಬೆಲೆಯ ಊಟ ನೀಡಲಾಗುತ್ತದೆ. ಈ ಕೂಪನ್ಗಳ ನಿರ್ವಹಣೆಗೆ ಆ್ಯಪ್ ವ್ಯವಸ್ಥೆ ಇದೆ.
ಸಹೃದಯಿಗಳು ನೀಡಬಹುದು ನೆರವು.. ತಿಂಗಳಿಗೊಮ್ಮೆ ಹೋಟೆಲ್ನವರಿಗೆ ಪೇಮೆಂಟ್ ಮಾಡಲಾಗುತ್ತದೆ. ಆ್ಯಪ್ನಲ್ಲಿ ದಾನಿಗಳಿಗೂ ಹಣ ಸಹಾಯ ಮಾಡುವ ವ್ಯವಸ್ಥೆಯೂ ಇದೆ. ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ 'ಫುಡ್ ಆನ್ ವಾಲ್'ನಿಂದ 12,500 ಕ್ಕೂ ಅಧಿಕ ಮಂದಿಯ ಹಸಿವು ತಣಿಸುವ ಕಾರ್ಯವಾಗಿದೆ.