ಕರ್ನಾಟಕ

karnataka

ETV Bharat / state

ಪೊಲೀಸ್ ಕಮಿಷನರ್ ಮನವಿಗೆ ಕೈಜೋಡಿಸಿದ ದಾನಿ: ಮಂಗಳಮುಖಿಯರಿಗೆ ಆಹಾರ ಕಿಟ್​ - ಮಂಗಳೂರು ಕೊರೊನಾ ನ್ಯೂಸ್​

ನಗರದಲ್ಲಿ ಖಾಸಗಿ ವ್ಯಾಪಾರ ಮಾಡುವ ಅರುಣ್ ಎಂಬ ಯುವ ಉದ್ಯಮಿ ಮಂಗಳಮುಖಿಯರ ಸಂಕಷ್ಟಕ್ಕೆ ಕೈಜೋಡಿಸಿ, ತಮ್ಮ ಕುಟುಂಬ ಸದಸ್ಯರ ಸಹಾಯದೊಂದಿಗೆ ಆಹಾರ ಕಿಟ್​ ನೀಡಿದ್ದಾರೆ.

Food Kit for transgender in Mangaluru
Food Kit for transgender in Mangaluru

By

Published : May 29, 2021, 2:57 AM IST

ಮಂಗಳೂರು:ನಗರ ಪೊಲೀಸ್ ಕಮಿಷನರ್ ಮನವಿಗೆ ಕೈಜೋಡಿಸಿರುವ ದಾನಿಯೋರ್ವರು ಮಂಗಳಮುಖಿಯರಿಗೆ ಆಹಾರ ಕಿಟ್​ ನೀಡಿ ಮಾನವೀಯತೆ ಮೆರೆದಿದ್ದಾರೆ.

ನಗರದಲ್ಲಿ ಖಾಸಗಿ ವ್ಯಾಪಾರ ಮಾಡುವ ಅರುಣ್ ಎಂಬ ಯುವ ಉದ್ಯಮಿ ಮಂಗಳಮುಖಿಯರ ಸಂಕಷ್ಟಕ್ಕೆ ಕೈಜೋಡಿಸಿ, ತಮ್ಮ ಕುಟುಂಬ ಸದಸ್ಯರ ಸಹಾಯದೊಂದಿಗೆ 80 ಆಹಾರ ಕಿಟ್​ ನೀಡಿದ್ದಾರೆ. ಈ ಕಿಟ್​​ನಲ್ಲಿ 10 ಕೆಜಿ ಅಕ್ಕಿ, ಬೇಳೆ, ರವೆ, ಎಣ್ಣೆ, ಟೀ ಪುಡಿ, ಸಕ್ಕರೆ, ಕಡಲೆ, ಹುರುಳಿ ಇತ್ಯಾದಿ ದಿನಸಿ ಸಾಮಾಗ್ರಿಗಳಿವೆ. ಈ ಮೂಲಕ ಸಣ್ಣ ಕುಟುಂಬವೊಂದು ತಿಂಗಳ ಕಾಲ ಜೀವನ ನಡೆಸಲು ಸಾಧ್ಯವಾಗುವಂತಹ ದಿನಸಿ ವಸ್ತು ನೀಡಿದ್ದಾರೆ.

ಮಂಗಳಮುಖಿಯರಿಗೆ ಆಹಾರ ಕಿಟ್​ ವಿತರಣೆ

ಇದಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್ ಮಾತನಾಡಿ, ಮೇ 21ರಂದು 'ಕೋವಿಡ್ ಸಮನ್ವಯ' ಎಂಬ ವೆಬಿನಾರ್ ಆಯೋಜನೆ ಮಾಡಲಾಗಿತ್ತು. ಈ ಮೂಲಕ ಸಾರ್ವಜನಿಕರಿಗೆ ಸಹಾಯ ಮಾಡುವವರ ವೇದಿಕೆ ಸಿದ್ಧಮಾಡಿ ಸ್ಥಳೀಯ ಅಥವಾ ವಿದೇಶದಲ್ಲಿರುವ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿರುವ ಎನ್ಆರ್​ಐಗಳಿಗೆ ನೆರವಿನ ಅವಶ್ಯಕತೆ ಇದ್ದಲ್ಲಿ ಸಂಪರ್ಕಿಸಬಹುದೆಂದು ಹೆಲ್ಪ್​ಲೈನ್​ ಸಂಖ್ಯೆ ನೀಡಲಾಗಿತ್ತು.

ಈ ಸಂಬಂಧ ಈಗಾಗಲೇ 21 ಕರೆಗಳು ಬಂದಿದ್ದು, ಎಲ್ಲರಿಗೂ ಸಹಾಯಹಸ್ತ ನೀಡಲಾಗಿದೆ. ಈ ನಡುವೆ ಮಂಗಳಮುಖಿ ಸಂಘಟನೆಯೊಂದು ಕೋವಿಡ್ ಸಮನ್ವಯ ಹೆಲ್ಪ್​ಲೈನ್​ಗೆ ಕರೆ ಮಾಡಿ ನೆರವು ಕೇಳಿತ್ತು. ಅವರು ವಿದೇಶದಲ್ಲಿರುವ ದಾನಿಗಳನ್ನು ಸಂಪರ್ಕ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮಂಗಳೂರು ಸಿಸಿಬಿ ಪೊಲೀಸ್ ಇನ್​​ಸ್ಪೆಕ್ಟರ್ ಮಹೇಶ್ ಕುಮಾರ್ ಹಾಗೂ ಡಿಸಿಪಿ ಹರಿರಾಂ ಶಂಕರ್ ಅವರು ಮಂಗಳಮುಖಿಯರಿಗೆ ನೆರವು ನೀಡುವ ದಾನಿಗಳ ಪತ್ತೆ ಕಾರ್ಯವನ್ನು ಮಾಡುತ್ತಿದ್ದರು.

ಈ ಸಂದರ್ಭದಲ್ಲಿ ಮಂಗಳೂರಿನ ಉದ್ಯಮಿ ಅರುಣ್​, ತಾವು ಮಂಗಳಮುಖಿಯರಿಗೆ ಆಹಾರ ಕಿಟ್ ಒದಗಿಸುತ್ತೇನೆಂದು ಮುಂದೆ ಬಂದಿದ್ದಾರೆ ಎಂದು ಶಶಿಕುಮಾರ್ ಎನ್ ಹೇಳಿದರು. ಈ ಬಗ್ಗೆ ಮಂಗಳಮುಖಿ ಅರುಂಧತಿ ಮಾತನಾಡಿ, ಈ ಸಂದಿಗ್ಧ ಸಂದರ್ಭದಲ್ಲಿ ಆಹಾರ ಕಿಟ್ ಒದಗಿಸಿರುವ ದಾನಿ ಅರುಣ್ ಅವರಿಗೆ ಧನ್ಯವಾದಗಳು. ನಮಗೆ ಈ‌ ಆಹಾರ ಕಿಟ್ ಒದಗಿಸಲು ನೆರವಾದ ಮಂಗಳೂರು ಪೊಲೀಸ್ ಕಮಿಷನರ್ ಹಾಗೂ ತಂಡಕ್ಕೂ ಧನ್ಯವಾದ ಎಂದಿದ್ದಾರೆ.

ABOUT THE AUTHOR

...view details