ಮಂಗಳೂರು: ನೀರು ತುಂಬಿದ್ದ ಬಕೆಟ್ಗೆ ಬಿದ್ದು 20 ತಿಂಗಳ ಮಗುವೊಂದು ಮೃತಪಟ್ಟಿರುವ ಘಟನೆ ಮಂಗಳೂರು ಹೊರವಲಯದ ಕಾವೂರು ಎಂಬಲ್ಲಿ ವರದಿಯಾಗಿದೆ. ಮೂಲತಃ ಜಾರ್ಖಂಡ್ ನಿವಾಸಿ ಸದ್ಯ ಕಾವೂರು ಮಸೀದಿ ಬಳಿ ವಾಸವಿರುವ ಫಿರೋಜ್ ಅನ್ಸಾರಿ ಮತ್ತು ಕಿತಾಬುನ್ ದಂಪತಿಯ ಪುತ್ರಿ ಆಯಿಶಾ ಮೃತಪಟ್ಟಿದೆ.
ಬುಧವಾರ ಸಂಜೆ ಮನೆಯಲ್ಲಿ ಅರ್ಧ ನೀರು ತುಂಬಿಸಿಟ್ಟಿದ್ದ ಬಕೆಟ್ ಬಳಿ ಮಗು ಆಟವಾಡುತ್ತಿತ್ತು. ಈ ವೇಳೆ ಮಗು ಬಕೆಟ್ಗೆ ಬಿದ್ದು ಉಸಿರುಗಟ್ಟಿ ಮೃತಪಟ್ಟಿದೆ. ಈ ಘಟನೆ ಸಂಬಂಧ ಕಾವೂರು ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಡ್ರೈನೇಜ್ ಪಿಟ್‌ನಲ್ಲಿ ಮಹಿಳೆಯ ಶವ ಪತ್ತೆ: ಮೂಲ್ಕಿ ಬಳಿಯ ಪಡುಪಣಂಬೂರಿನ ಮನೆಯೊಂದರ ಹಿಂದುಗಡೆ ಇರುವ ಡ್ರೈನೇಜ್ ಪಿಟ್‌ನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಪುಷ್ಪರಾಜ್ ಅಮೀನ್ ಎಂಬುವರ ಮನೆಯ ಹಿಂದುಗಡೆ ಇರುವ ಡ್ರೈನೇಜ್ ಪಿಟ್‌ನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಮೃತ ಮಹಿಳೆಯನ್ನು ಸ್ಥಳೀಯ ಕಲ್ಲಾಪು ನಿವಾಸಿ ನಾಗಮ್ಮ ಶೆಟ್ಟಿಗಾರ್ (85) ಎಂದು ಗುರುತಿಸಲಾಗಿದೆ.
ಕೆಲವು ತಿಂಗಳ ಹಿಂದೆ ನಾಗಮ್ಮ ಮನೆಯಿಂದ ನಾಪತ್ತೆಯಾಗಿದ್ದರು. ಇವರ ನಾಪತ್ತೆ ಬಗ್ಗೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮನೆಯ ಮಾಲೀಕರು ಮುಂಬೈಯಲ್ಲಿದ್ದು, ಆಗಾಗ ಬಂದು ಹೋಗುತ್ತಿದ್ದರು. ಮನೆಯ ಹಿಂದಿನಿಂದ ವಿಪರೀತ ವಾಸನೆ ಬರುತ್ತಿರುವ ಬಗ್ಗೆ ಸ್ಥಳೀಯರು ದೂರಿದ್ದರು. ಬಳಿಕ ಸಂಶಯಗೊಂಡ ಸ್ಥಳೀಯರು ಪೊಲೀಸರ ಮೂಲಕ ಪರಿಶೀಲನೆ ನಡೆಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಹೆದ್ದಾರಿ ಗುಂಡಿಗೆ ವ್ಯಕ್ತಿ ಬಲಿ:ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಕಂಪಾಡಿ - ಪಣಂಬೂರು ನಡುವೆ ಮಂಗಳವಾರ ನಡೆದ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಹೆದ್ದಾರಿಯ ಗುಂಡಿಗಳನ್ನು ಮುಚ್ಚಲು ಕ್ರಮ ವಹಿಸಿಲ್ಲ ಎಂಬ ಕಾರಣಕ್ಕೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) ನೋಟಿಸ್ ನೀಡಲು ಮಂಗಳೂರು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಹೆದ್ದಾರಿಯ ಗುಂಡಿ ತಪ್ಪಿಸುವ ಭರದಲ್ಲಿ ಸ್ಕೂಟರ್ ಸವಾರ ಲಾರಿಯ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ರಸ್ತೆ ಗುಂಡಿಯಿಂದಾಗಿ ಅಪಘಾತ ಸಂಭವಿಸಿದರೆ, ಆ ರಸ್ತೆಯ ನಿರ್ವಹಣೆಯ ಹೊಣೆ ಹೊತ್ತಿರುವ ಇಲಾಖೆ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ. ಆದರೆ, ರಸ್ತೆ ಗುಂಡಿಯಿಂದಾಗಿ ಸಂಭವಿಸುವ ಅಪಘಾತ ಪ್ರಕರಣಗಳಲ್ಲೂ ಸಂಚಾರ ಪೊಲೀಸರು ಸಂಬಂಧ ಪಟ್ಟ ಇಲಾಖೆ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ಕೇಳಿಬಂದಿತ್ತು.