ಪುತ್ತೂರು: ಹಳೆಯ ನೋಟುಗಳನ್ನು (Old note) ವಿಲೇವಾರಿ ಮಾಡಿಕೊಟ್ಟವರಿಗೆ 30ಶೇ ಕಮಿಷನ್ ನೀಡುವುದಾಗಿ ಹೇಳಿ ಮಹಿಳೆಯೊಬ್ಬರಿಂದ 10 ಲಕ್ಷ ರೂ.ಪಡೆದು ನೋಟಿನ ಬದಲು ಕಾಗದದ ತುಂಡುಗಳನ್ನು ನೀಡಿ ವಂಚಿಸಿರುವ ಆರೋಪ ಕೇಳಿ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರೆಂಜದ ಅರಂತನಡ್ಕ ನಿವಾಸಿ ಸಹಿತ ಐವರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ತಮ್ಮ ಬಳಿ ದೇವಸ್ಥಾನಗಳ ಹುಂಡಿಯಲ್ಲಿ ಭಕ್ತರು ಹಾಕಿದ್ದ 100 ರೂ. ಮುಖ ಬೆಲೆಯ ರೂ.10 ಲಕ್ಷ ಮೌಲ್ಯದ ನೋಟುಗಳಿದ್ದು (10 Lakh Old notes), ಅವುಗಳನ್ನು ವಿಲೇವಾರಿ ಮಾಡಲು ತೊಂದರೆ ಆಗಿದೆ. ಈ ನೋಟುಗಳನ್ನು ಪಡೆದು 500 ರೂ ಹಾಗೂ 2000 ಮುಖಬೆಲೆಯ ನೋಟುಗಳನ್ನು ಕೊಡುವವರಿಗೆ ಶೇ.30ರಷ್ಟು ಕಮಿಷನ್ ನೀಡುವುದಾಗಿ ಆರೋಪಿಗಳು ನಂಬಿಸಿದ್ದಾರೆ. ಉಜಿರೆಯ ಕೃಪಾ ಎಂಬವರಿಂದ 10 ಲಕ್ಷ ಪಡೆದು ವಂಚಿಸಿದ್ದರು ಎಂದು ಆರೋಪಿಸಲಾಗಿದೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ? :ಈ ಸಂಬಂಧ ತಿಂಗಳಾಡಿಯ ಕೊರಗಪ್ಪ ಎಂಬವರು ನೀಡಿದ್ದ ದೂರಿನ ಜಾಡು ಹಿಡಿದ ಕಡೂರು ಪೊಲೀಸರು (Kadur Police) ಈ ಪ್ರಕರಣವನ್ನು ಭೇದಿಸಿದ್ದು, ಆರೋಪಿಗಳ ದೂರವಾಣಿ ಸಂಖ್ಯೆ, ವಿಳಾಸ ಆಧರಿಸಿ ಕಾರ್ಯಾಚರಣೆ ನಡೆಸಿದ್ದರು. ನ.20 ರಂದು ಕಡೂರು ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ (Kadur KSRTC bus stop) ಕಡೂರು ನಿವಾಸಿ ಮಹೇಶ್(40) ಮತ್ತು ಬೆಟ್ಟಂಪಾಡಿ ರೆಂಜ ಅರಂತನಡ್ಕದ ನಾರಾಯಣ ರೈ(52)ಎಂಬವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.
ಈ ವೇಳೆ ಬಂಧಿತ ಆರೋಪಿಗಳು, ಸ್ವಾಮೀಜಿ ವೇಷ ಧರಿಸಿ ವಂಚಿಸುತ್ತಿದ್ದ ಖಾವಿ ಬಟ್ಟೆ, ರುದ್ರಾಕ್ಷಿ ಸರ, 100 ರೂ.ಮುಖ ಬೆಲೆಯ ಹಳೆಯ ನೋಟ್‌ಗಳಿದ್ದ ಬ್ಯಾಗ್ ಮತ್ತು ಆ್ಯಕ್ಟಿವಾ ಸ್ಕೂಟರನ್ನು ಪೊಲೀಸರು ವಶ ಪಡಿಸಿಕೊಂಡಿದ್ದರು.
ಬಂಧಿತ ಆರೋಪಿಗಳಾದ ಮಹೇಶ್ ಮತ್ತು ನಾರಾಯಣ ರೈ ನೀಡಿದ್ದ ಮಾಹಿತಿ ಮೇರೆಗೆ ತನಿಖೆ ಮುಂದುವರಿಸಿದ ಪೊಲೀಸರು ಚಿಕ್ಕಮಗಳೂರು ನಗರದ ತಮಿಳು ಕಾಲನಿಯ ಲಾರಿ ಸ್ಟ್ಯಾಂಡ್ ಬಳಿಯ ಇಲಿಯಾಜ್(49), ತುಮಕೂರಿನ ಗಂಗಾಧರ (33) ಮತ್ತು ವಿನಯ್ ಕುಮಾರ್(33) ಎಂಬವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಮಾರುತಿ ಒಮ್ನಿ ಮತ್ತು ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಿಂದ ಒಟ್ಟು 5,10,000 ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಏನು ಮಾಡ್ತಿದ್ದರು:ತಮ್ಮಲ್ಲಿ ಕೆಲವರಿಗೆ ಪರಿಚಿತರಾಗಿರುವ ತಿಂಗಳಾಡಿಯ ಕೊರಗಪ್ಪ ಪೂಜಾರಿ ಎಂಬವರನ್ನು ಸಂಪರ್ಕಿಸಿದ್ದ ಆರೋಪಿಗಳು ಕಮಿಷನ್ ಹಣದ ವಿಷಯ ಪ್ರಸ್ತಾಪಿಸಿ ಈ ವಿಚಾರವನ್ನು ಬೇರೆಯವರಿಗೂ ತಿಳಿಸಲು ಹೇಳಿದ್ದರು. ಅದರಂತೆ ಕೊರಗಪ್ಪ ಅವರು ತಮಗೆ ಪರಿಚಯದ ಉಜಿರೆಯ ಕೃಪಾ ಅವರಿಗೆ ವಿಷಯ ತಿಳಿಸಿದ್ದರು.