ಮಂಗಳೂರು(ದಕ್ಷಿಣ ಕನ್ನಡ): ಇಬ್ಬರನ್ನು ಕೊಲೆಗೈಯ್ಯಲು ಯತ್ನಿಸಿರುವ ಪ್ರಕರಣದಲ್ಲಿ ಮಂಗಳೂರು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಐವರು ಅಪರಾಧಿಗಳಿಗೆ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್. ಅವರು ಈ ತೀರ್ಪು ನೀಡಿದರು. ಮುಲ್ಕಿ ನಿವಾಸಿಗಳಾದ ವಿಕ್ಕಿ ಪೂಜಾರಿ (32), ಈತನ ಸಹೋದರ ಶಶಿ ಪೂಜಾರಿ (30), ವಾಮಂಜೂರು ಪೆರ್ಮಂಕಿಯ ಧನರಾಜ್ ಪೂಜಾರಿ (31), ಬೋಳೂರಿನ ಮೋಕ್ಷಿತ್ ಸಾಲ್ಯಾನ್ (28) ಮತ್ತು ರಾಜೇಶ್ (30) ಶಿಕ್ಷೆಗೊಳಗಾದವರು. ಪ್ರಕರಣದ ಮತ್ತೋರ್ವ ಆರೋಪಿ ಗಣೇಶ್ (28) ತಲೆಮರೆಸಿಕೊಂಡಿದ್ದಾನೆ.
ಪ್ರಕರಣದ ವಿವರ: 2015ರ ಜು. 27ರಂದು ಸಂಜೆ 6:30ರ ಸುಮಾರಿಗೆ ಕುದ್ರೋಳಿಯ ಅಳಕೆ ಮಾರ್ಕೆಟ್ ಮುಂಭಾಗ ಲತೀಶ್ ನಾಯಕ್ ಮತ್ತು ಇಂದ್ರಜಿತ್ ಎಂಬಿಬ್ಬರ ಕೊಲೆ ಯತ್ನ ನಡೆದಿತ್ತು. ಅಂದಿನ ಪೊಲೀಸ್ ಅಧಿಕಾರಿಗಳಾದ ಟಿ.ಡಿ.ನಾಗರಾಜ್ ಮತ್ತು ಭಜಂತ್ರಿ ಅವರು ತನಿಖೆ ನಡೆಸಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾಯಾಲಯ ವಾದ-ಪ್ರತಿವಾದಗಳನ್ನು ಆಲಿಸಿ ಆರೋಪಿಗಳನ್ನು 'ತಪ್ಪಿತಸ್ಥರು' ಎಂದು ಘೋಷಿಸಿದೆ.