ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವ ಭೀತಿಯ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದ್ದ ಮೀನುಗಾರಿಕೆ ಸೆ.1 ರಿಂದ ಮತ್ತೆ ಆರಂಭವಾಗಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.
ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮೀನುಗಾರಿಕೆ ಪುನರಾರಂಭ ಕುರಿತ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆ.1 ರಿಂದ ಮೀನುಗಾರಿಕೆ ಪ್ರಾರಂಭ ಮಾಡುವಂತೆ ಈ ಹಿಂದೆ ಚಿಂತನೆ ನಡೆಸಲಾಗಿತ್ತು. ಆದರೆ, ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಮುಂದಿನ ಸೆಪ್ಟೆಂಬರ್ ತಿಂಗಳಿಂದ ಮೀನುಗಾರಿಕೆ ಪ್ರಾರಂಭ ಮಾಡಲಾಗುತ್ತದೆ ಎಂದು ತಿಳಿಸಿದರು.
ಮೀನುಗಾರಿಕೆಯಲ್ಲಿ ಶೇ.75 ರಷ್ಟು ಕಾರ್ಮಿಕರು ಹೊರ ರಾಜ್ಯದವರಾಗಿದ್ದು, ಅವರು ರಾಜ್ಯಕ್ಕೆ ಆಗಮಿಸುವ ಮೊದಲು ಸೇವಾ ಸಿಂಧೂವಿನಲ್ಲಿ ಅರ್ಜಿ ಸಲ್ಲಿಸಬೇಕು. ರಾಜ್ಯ ಪ್ರಯಾಣ ಬೆಳಸುವವರು ಕೊರೊನಾ ಪರೀಕ್ಷೆಗೆ ಒಳಗಾಗಿ ನೆಗೆಟಿವ್ ವರದಿ ಬಂದ ಕಾರ್ಮಿಕರು ಮಾತ್ರ ನಮ್ಮ ಜಿಲ್ಲೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ಕೊರೊನಾ ಮಾರ್ಗಸೂಚಿಯಂತೆ ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರಂಟೈನ್ನಲ್ಲಿ ಇರಬೇಕು. ಬರುವ ಕಾರ್ಮಿಕರ ಜವಾಬ್ದಾರಿಗೆ ಸಂಬಂಧಿಸಿದ ಮೀನುಗಾರಿಕೆ ಮಾಲೀಕರು ನೋಡಿಕೊಳ್ಳಬೇಕು ಎಂದರು.