ಮಂಗಳೂರು :ಮೀನುಗಾರಿಕಾ ಕ್ಷೇತ್ರದಲ್ಲಿ ನೂತನ ಪ್ರಯೋಗಗಳು ನಡೆಯುತ್ತಿವೆ. ಇದೀಗ ರಾಜ್ಯದಲ್ಲಿಯೇ ಮೊದಲ ಬಾರಿಗೆ ನಗರದ ಹೊಯಿಗೆ ಬಜಾರ್ ಸಮೀಪ ತೇಲುವ ಜಟ್ಟಿ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ (ಕೆಎಫ್ಡಿಸಿ) ವತಿಯಿಂದ ನಿರ್ಮಾಣವಾಗುವ ಈ ತೇಲುವ ಜಟ್ಟಿಗೆ 6 ಕೋಟಿ ರೂ. ಬಿಡುಗಡೆಯಾಗಿದೆ. ಈ ಯೋಜನೆಗೆ ಟೆಂಡರ್ ಆಹ್ವಾನ ಮಾಡಲಾಗಿದೆ. ಸೆ.27ಕ್ಕೆ ಈ ಪ್ರಕ್ರಿಯೆ ಕೊನೆಗೊಳ್ಳಲಿದೆ. ಪೈಲಟ್ ಯೋಜನೆಯಾಗಿ ತೆಗೆದುಕೊಂಡ ಹಿನ್ನೆಲೆ ಮುಂದೆ ಉಡುಪಿಯ ಮಲ್ಪೆಯಲ್ಲೂ ತೇಲುವ ಜಟ್ಟಿ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ಇದಕ್ಕಾಗಿ ಹಣ ಬಿಡುಗಡೆಯ ನಿರೀಕ್ಷೆ ಇದೆ.
ತೇಲುವ ಜಟ್ಟಿಯಲ್ಲಿ ನಾಡದೋಣಿ, ಸಾಂಪ್ರಾದಾಯಿಕ ದೋಣಿಗಳಿಗೆ ಆದ್ಯತೆ ನೀಡಲಾಗುತ್ತದೆ. ಸದ್ಯದ ಮಟ್ಟಿಗೆ 200 ನಾಡದೋಣಿಗಳು ಹಾಗೂ ಇನ್ನಿತರ ಮರದ ಬೋಟ್ಗಳಿಗೆ ಇಲ್ಲಿ ನಿಲುಗಡೆ ಮತ್ತು ಮೀನುಗಳ ಅನ್ಲೋಡ್ ಮಾಡಲು ಈ ತೇಲುವ ಜಟ್ಟಿ ಸಹಕಾರಿಯಾಗಲಿದೆ.
ಈ ತೇಲುವ ಜಟ್ಟಿಯು ನೀರಿನ ತಳಭಾಗದಲ್ಲಿ ನೂತನ ತಂತ್ರಜ್ಞಾನದ ಮೂಲಕ ರಬ್ಬರ್ ಅಳವಡಿಕೆ ಮಾಡಿ ಮೇಲ್ಮೈಗೆ ಕಾಂಕ್ರೀಟ್ ತುಂಬುವ ಮೂಲಕ ಜಟ್ಟಿ ನಿರ್ಮಾಣವಾಗಲಿದೆ. ಈ ಜಟ್ಟಿ 60 ಮೀ. ಉದ್ದವಿದ್ದು, 6 ಮೀ. ಅಗಲವಿರಲಿದೆ. 1ಮೀಟರ್ನಷ್ಟು ದಪ್ಪವಿದ್ದು, 180 ಟನ್ ತೂಕವಿರಲಿದೆ. 360 ಟನ್ ಧಾರಣ ಸಾಮರ್ಥ್ಯ ಹೊಂದಿದೆ.