ಮಂಗಳೂರು:ನಗರದ ಪರಿಸರ ಪ್ರೇಮಿಗಳು ಮೀನುಗಳನ್ನು ರಕ್ಷಣೆ ಮಾಡುವ ವಿಶೇಷ ಕಾರ್ಯ ಮಾಡಿದ್ದಾರೆ. ನಗರದ ಕೊಡಿಯಾಲಬೈಲ್ ನ ಟಿಎಂಎಪೈ ಕನ್ವೆನ್ಷನ್ ಸೆಂಟರ್ ನ ಮುಂಭಾಗದ ನಿರ್ಮಾಣ ಹಂತದಲ್ಲಿರುವ ಕಟ್ಟಡದ ತಳಭಾಗದ ಮೂರು ಎಕರೆ ಜಾಗದಲ್ಲಿ ತುಂಬಿಕೊಂಡಿರುವ ನೀರಿನಲ್ಲಿ ಸಾವಿರಾರು ಮೀನುಗಳು ಇದ್ದವು. ಇವುಗಳನ್ನು ಬಲೆ ಹಾಕಿ ನಾಜೂಕಾಗಿ ಹಿಡಿದು ಸಂರಕ್ಷಿಸಲಾಗಿದೆ. ಸಂರಕ್ಷಿಸಲಾದ ಮೀನುಗಳನ್ನು ನಗರದ ಕಾವೂರು ಕೆರೆ ಹಾಗೂ ಮಂಗಳಾದೇವಿ ಸಮೀಪದ ಗುಜ್ಜರ ಕೆರೆಗೆ ಬಿಡಲಾಗಿದೆ.
ಮಂಗಳೂರಿನಲ್ಲಿ ವಿನೂತನ ರೀತಿಯಲ್ಲಿ ಮೀನುಗಳನ್ನು ರಕ್ಷಿಸಿದ ಪರಿಸರ ಪ್ರೇಮಿಗಳು - ಈಟಿವಿ ಭಾರತ ಕನ್ನಡ
ಮಂಗಳೂರಿನಲ್ಲಿ ಬರೋಬ್ಬರಿ ಹತ್ತು ಸಾವಿರಕ್ಕೂ ಅಧಿಕ ಮೀನುಗಳನ್ನು ಪರಿಸರ ಪ್ರೇಮಿಗಳು ರಕ್ಷಿಸಿದ್ದಾರೆ.
ಮಂಗಳೂರಿನ ಪರಿಸರ ಪ್ರೇಮಿಗಳಾದ ಜೀತ್ ಮಿಲನ್ ರೋಚ್, ಭುವನ್ ದೇವಾಡಿಗ, ಸೆಲ್ಮಾ, ನಿಧಿ ಹಾಗೂ ಅತೀಕ್ ಅವರು ಮೀನುಗಳನ್ನು ಸಂರಕ್ಷಣೆ ಮಾಡಿರುವ ತಂಡದಲ್ಲಿದ್ದವರು. ಇವರು ಬರೋಬ್ಬರಿ ಹತ್ತು ಸಾವಿರಕ್ಕೂ ಅಧಿಕ ಮೀನುಗಳನ್ನು ರಕ್ಷಿಸಿದ್ದಾರೆ.
ಸಾಕಷ್ಟು ಕಾಲದಿಂದ ಕಾಮಗಾರಿ ನಡೆಯದೇ ಹಾಗೆಯೇ ಉಳಿದಿದ್ದ ನಾರ್ತನ್ ಸ್ಕೈ ಮಾಲಕರ ನಿರ್ಮಾಣ ಹಂತದ ಕಟ್ಟಡದ ತಳಭಾಗದ ಮೂರು ಎಕರೆ ಪ್ರದೇಶದಲ್ಲಿ ನೀರು ತುಂಬಿಕೊಂಡಿತ್ತು. ಈ ನೀರಿನಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ಮನಪಾ ಆರೋಗ್ಯ ಇಲಾಖೆ ತಿಲಿಪಿಯಾ(ಸರ್ಕಾರ್) ಮೀನುಮರಿಗಳನ್ನು ಹಾಕಿತ್ತು. ಸಾಕಷ್ಟು ಕಾಲಗಳಿಂದ ನೀರಿನಲ್ಲಿದ್ದ ಈ ಮೀನುಗಳು 10 ಸಾವಿರಕ್ಕಿಂತಲೂ ಅಧಿಕ ಸಂಖ್ಯೆಯಷ್ಟಾಗಿತ್ತು. ಮತ್ತೆ ಕಟ್ಟಡದ ಕಾಮಗಾರಿ ನಡೆಸುವ ವೇಳೆ, ಈ ಮೀನುಗಳ ರಕ್ಷಣಾ ಕಾರ್ಯಾಚರಣೆ ಹೊಣೆಯನ್ನು ಜೀತ್ ಮಿಲನ್ ರೋಚ್ ರಿಗೆ ವಹಿಸಿದ್ದರು.
15 - 20 ಫೀಟ್ ಆಳದ ಕಟ್ಟಡದ ತಳಭಾಗದಲ್ಲಿ ತುಂಬಿದ್ದ ಅಗಾಧವಾದ ಪ್ರಮಾಣದ ನೀರನ್ನು ಖಾಲಿ ಮಾಡುವುದೇ ದುಸ್ತರವಾಗಿತ್ತು. ಅದಕ್ಕಾಗಿ 11 ದಿನಗಳ ಕಾಲ 6 ಪಂಪ್ ಗಳನ್ನು ಬಳಸಿ ನಿತ್ಯ ಬೆಳಗ್ಗೆ 6ರಿಂದ ರಾತ್ರಿ 8ರವರೆಗೆ ಖಾಲಿ ಮಾಡಲಾಗುತ್ತಿತ್ತು. ಆ ಬಳಿಕ ಮೀನಿನ ಸಂರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. ಬಲೆಯನ್ನು ಬಳಸಿ ಮೀನುಗಳನ್ನು ಹಿಡಿದು ಕ್ರೇಟ್ ಗಳ ಮೂಲಕ ಸಾಗಿಸಿ ಸುರಕ್ಷಿತವಾಗಿ ಕೆರೆಗಳಿಗೆ ಬಿಡಲಾಗಿದೆ. ಮುಗುಡು ಮೀನುಗಳನ್ನು ಕೂಳೂರು ಫಲ್ಗುಣಿ ನದಿಗೆ ಬಿಡಲಾಗಿದೆ.