ಮಂಗಳೂರು: ಏಪ್ರಿಲ್-ಮೇ ತಿಂಗಳು ವಿಫುಲವಾಗಿ ಮೀನುಗಾರಿಕೆ ನಡೆಸುವ ಸಮಯ. ಈ ಸಂದರ್ಭದಲ್ಲಿ ಹವಾಮಾನ ವೈಪರೀತ್ಯಗಳು ಕಡಿಮೆ ಇದ್ದು ಉಳಿದೆಲ್ಲ ಸಮಯಗಳಿಗಿಂತ ಅತ್ಯಧಿಕ ಸಂಖ್ಯೆಯಲ್ಲಿ ಮೀನುಗಾರಿಕೆ ನಡೆಯುತ್ತಿದೆ. ಆದರೆ, ಗಗನಕ್ಕೇರುತ್ತಿರುವ ಡೀಸೆಲ್ ಬೆಲೆ ಸೀಸನ್ ಅವಧಿಯಲ್ಲಿ ಮೀನುಗಾರಿಕೆಗೆ ತಡೆಯೊಡ್ಡಿದೆ.
ದೇಶದಲ್ಲಿ ದಿನದಿಂದ ದಿನಕ್ಕೆ ತೈಲಬೆಲೆ ಹೆಚ್ಚಳವಾಗುತ್ತಿದೆ. ಗಗನಕ್ಕೇರುತ್ತಿರುವ ಡೀಸೆಲ್ ಬೆಲೆಯಿಂದ ಕರಾವಳಿಯ ಪ್ರಮುಖ ವಹಿವಾಟಾದ ಮತ್ಸೋದ್ಯಮದ ಮೇಲೆ ದುಷ್ಪರಿಣಾಮ ಬೀರಿದೆ. ಮೀನುಗಾರಿಕೆಗೆ ತೆರಳುವ ಆಳ ಸಮುದ್ರ ಬೋಟ್, ಪರ್ಷಿಯನ್ ಬೋಟ್ಗಳಿಗೆ ಡೀಸೆಲ್ ಅತ್ಯಗತ್ಯ. ಆಳಸಮುದ್ರಕ್ಕೆ ತೆರಳುವ ಬೋಟ್ಗಳು ಲಕ್ಷಾಂತರ ರೂ. ಗಳ ಡೀಸೆಲ್ ತುಂಬಿಸಿ ಮೀನುಗಾರಿಕೆಗೆ ಹೋಗುತ್ತವೆ.
ಡೀಸೆಲ್ ವೆಚ್ಚವೂ ಸೇರಿದಂತೆ ಸುಮಾರು 5 ಲಕ್ಷ ರೂ. ವರೆಗೆ ಒಂದು ಟ್ರಿಪ್ಗೆ ಖರ್ಚಾಗುತ್ತದೆ. ಆದರೆ, ಮೀನುಗಾರಿಕೆಗೆ ತೆರಳುತ್ತಿರುವ ಬೋಟ್ಗಳಿಗೆ ಅಷ್ಟು ಪ್ರಮಾಣದ ಮೀನುಗಳು ಬಲೆಗೆ ಬೀಳುತ್ತಿಲ್ಲ. ಪರಿಣಾಮ ಮತ್ಸೋದ್ಯಮಿಗಳು ನಷ್ಟಕ್ಕೊಳಗಾಗುತ್ತಿದ್ದಾರೆ. ನಷ್ಟದ ಭೀತಿಯ ಹಿನ್ನೆಲೆಯಲ್ಲಿ ಬೋಟ್ಗಳ ಮಾಲೀಕರು ಮೀನುಗಾರಿಕೆಗೆ ಬೋಟ್ಗಳನ್ನು ಕಳುಹಿಸದೆ ಧಕ್ಕೆಯಲ್ಲಿಯೇ ಲಂಗರು ಹಾಕಿದ್ದಾರೆ.