ಮಂಗಳೂರು: ಹೊರ ರಾಜ್ಯಗಳಿಂದ ಸುಮಾರು ಶೇ.25 ರಷ್ಟು ಬೃಹತ್ ಲಾರಿಗಳಲ್ಲಿ ಮೀನುಗಳು ಮಾರಾಟಕ್ಕೆ ಮಂಗಳೂರಿಗೆ ಆಗಮಿಸುತ್ತಿವೆ. ಆದರೆ, ಸದ್ಯ ಲಾರಿಗಳಿಗೆ ತಂಗಲು ಸೂಕ್ತ ಸ್ಥಳಾವಕಾಶವಿರಲಿಲ್ಲ. ಹೀಗಾಗಿ ಹಳೆ ಬಂದರಿನಲ್ಲಿ ಶನಿವಾರ ರಾತ್ರಿಯಿಂದ ಚಿಲ್ಲರೆ ಮಾರಾಟಗಾರರಿಗೆ ಮೀನು ಅನ್‌ಲೋಡ್ ಮಾಡಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ನಗರದ ಹಳೆ ಬಂದರು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಮುಂಜಾನೆ 3 ರಿಂದ ಬೆಳಗ್ಗೆ 8ರ ಒಳಗೆ ಈ ಪ್ರಕ್ರಿಯೆ ನಡೆಯಬೇಕು. ಟೆಂಪೋದಲ್ಲಿ ಬರುವ ಸಣ್ಣ ವ್ಯಾಪಾರಸ್ಥರಿಗೆ ಮಾತ್ರ ಇಲ್ಲಿಗೆ ಪ್ರವೇಶವಿದ್ದು ಸಾರ್ವಜನಿಕರಿಗೆ ಪ್ರವೇಶವಿಲ್ಲ. ಸಾಮಾಜಿಕ ಅಂತರ ಪಾಲಿಸಿಕೊಂಡು ಮಾರಾಟಗಾರರು ಇಲ್ಲಿಂದ ಮೀನು ಖರೀದಿಸಬಹುದು ಎಂದಿದ್ದಾರೆ.