ಮಂಗಳೂರು: ಎಷ್ಟು ದೂರ ಕಣ್ಣುಹಾಯಿಸಿದರೂ ಈ ನದಿಯೊಂದರಲ್ಲಿ ಸಾವಿರಾರು ಮಂದಿ ಮೀನು ಹಿಡಿಯುವವರು ಕಾಣಸಿಗುತ್ತಾರೆ. ಆದರೆ ಇವರು ಯಾರೂ ಬೆಸ್ತರಲ್ಲ. ಬದಲಾಗಿ ದೈವಸ್ಥಾನವೊಂದರ ದೈವದ ಪ್ರೀತ್ಯರ್ಥವಾಗಿ ಎಲ್ಲ ಜಾತಿ-ಧರ್ಮ-ಮತದವರು ಒಟ್ಟು ಸೇರಿ ಮೀನು ಹಿಡಿಯುತ್ತಾರೆ. ಬಳಿಕ ಹಿಡಿದ ಮೀನುಗಳನ್ನು ಮನೆಗೆ ತೆಗೆದುಕೊಂಡು ಹೋಗಿ ದೈವದ ಪ್ರಸಾದವಾಗಿ ತಿನ್ನುತ್ತಾರೆ.
ಇದು ನಡೆಯುವುದು ಮಂಗಳೂರಿನ ಹೊರವಲಯದ ಹಳೆಯಂಗಡಿ ಗ್ರಾಮದ ಕಂಡೇವು ಆಯನ ಜಾತ್ರೆಯಲ್ಲಿ. ಧರ್ಮರಸು ಉಳ್ಳಾಯ ದೈವ ನೆಲೆ ನಿಂತ ಪ್ರಸಿದ್ಧ ಕ್ಷೇತ್ರ ಕಂಡೇವು ಅಥವಾ ಖಂಡಿಗೆಯು ನಂದಿನಿ ನದಿಯ ತಟದಲ್ಲಿದೆ. ಇದನ್ನು ಕಂಡೇವು ಕರಿಯ ಎಂದು ಹೇಳಲಾಗುತ್ತದೆ. ಮಾಮೂಲಿಯಾಗಿ ಈ ಕ್ಷೇತ್ರದ ಸಾನ್ನಿಧ್ಯವಿರುವ ಸ್ಥಳದಲ್ಲಿ ಮೀನು ಹಿಡಿಯುವುದು ನಿಷೇಧ. ಯಾಕೆಂದರೆ ಕಂಡೇವು ಕ್ಷೇತ್ರದ ಒಡೆಯ ಎಂದೇ ಹೇಳಲಾಗುವ ಉಳ್ಳಾಯ ದೈವವೇ ಇಲ್ಲಿ ಮೀನು ಹಿಡಿಯುತ್ತಿರುತ್ತಾನೆ ಎಂಬ ನಂಬಿಕೆಯಿದೆ. ಅಲ್ಲದೆ ಕಂಡೇವು ಕರಿಯದ ಮೀನುಗಳು ಉಳ್ಳಾಯ ದೈವದ ಅಧೀನದಲ್ಲಿವೆ ಎಂದು ಅನಾದಿ ಕಾಲದಿಂದಲೂ ಬಂದಿರುವ ನಂಬಿಕೆ. ಆದರೆ ವರ್ಷಕ್ಕೆ ಒಂದು ದಿನ ಉಳ್ಳಾಯ ದೈವದ ಒಪ್ಪಿಗೆಯ ಮೇರೆಗೆ ಮೀನು ಹಿಡಿಯುವ ವಿಶೇಷ ಜಾತ್ರೆ ನಡೆಯುತ್ತದೆ. ಈ ಪ್ರಕಾರ ವೃಷಭ ಸಂಕ್ರಮಣ (ಮೇ ತಿಂಗಳ 14 ಅಥವಾ 15 ನೇ ತಾರೀಕು)ದಂದು ಎಲ್ಲರಿಗೂ ಇಲ್ಲಿ ಮೀನು ಹಿಡಿಯಲು ಮುಕ್ತ ಅವಕಾಶ ನೀಡಲಾಗುತ್ತದೆ.
ವೃಷಭ ಸಂಕ್ರಮಣದಂದು ಬೆಳ್ಳಂಬೆಳಗ್ಗೆ ದೈವಕ್ಕೆ ಪೂಜೆಯಾಗುತ್ತದೆ. ಬಳಿಕ ಬೆಳಗ್ಗೆ ಏಳು ಗಂಟೆ ಸುಮಾರಿಗೆ ಉಳ್ಳಾಯ ದೈವದ ಪ್ರಸಾದ ತಂದು ನದಿಗೆ ಹಾಕುತ್ತಾರೆ. ಬಳಿಕ ಸುಡುಮದ್ದೊಂದನ್ನು ಸಿಡಿಸುತ್ತಾರೆ. ಇದು ಈಗ ಮೀನು ಹಿಡಿಯಬಹುದು ಎಂಬ ಸೂಚನೆ. ಸುಡುಮದ್ದು ಸಿಡಿಸಿದ ತಕ್ಷಣ ಎಲ್ಲರೂ ನದಿಗಿಳಿದು ಮೀನು ಬೇಟೆ ನಡೆಸುತ್ತಾರೆ. ಅಲ್ಲದೆ ಈ ಮೀನನ್ನೇ ಪ್ರಸಾದವೆಂದು ನಂಬಿ ಮಧ್ಯಾಹ್ನದ ಸಮಯ ಪದಾರ್ಥ ಮಾಡಿ ಮನೆ ಮಂದಿ ಎಲ್ಲರೂ ಊಟ ಮಾಡುತ್ತಾರೆ. ಅಲ್ಲದೆ ಈ ಕಂಡೇವಿನ ಜಾತ್ರೆಯು ತುಳುನಾಡಿನ ವಿಶೇಷ ಜಾತ್ರೆಯೂ ಆಗಿದೆ.