ಮಂಗಳೂರು: ನಗರದ ಅತ್ತಾವರದ ಅಪಾರ್ಟ್ಮೆಂಟ್ವೊಂದರಲ್ಲಿ ಬೆಂಕಿ ಅವಘಡದಿಂದ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಸಹೈನ್ ಮೂಸಬ್ (57) ಮೃತಪಟ್ಟ ಮಹಿಳೆ.
ನಗರದ ಅತ್ತಾವರದ ಅಪಾರ್ಟ್ಮೆಂಟ್ನ ಫ್ಲ್ಯಾಟ್ವೊಂದರಲ್ಲಿ ಇಂದು ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದೆ. ಅಪಾರ್ಟ್ಮೆಂಟ್ಗೆ ಬೆಂಕಿ ತಗುಲುವ ವೇಳೆ ಮಹಿಳೆ ಬಾತ್ ರೂಂಗೆ ತೆರಳಿದ್ದು, ಬೆಂಕಿಯ ಹೊಗೆಗೆ ಬಾತ್ ರೂಂನೊಳಗೆ ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ. ಮನೆಯೊಳಗಿದ್ದ ಮತ್ತೊಬ್ಬರು ತೀವ್ರ ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಕಿ ಅವಘಡಗೊಂಡ ಅಪಾರ್ಟ್ಮೆಂಟ್ ಅಗ್ನಿ ಅವಘಡದ ಮಾಹಿತಿ ಪಡೆದ ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಸಂಭವಿಸಿದೆ ಎಂದು ಅಗ್ನಿಶಾಮಕ ದಳದ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ. ಬೆಂಕಿ ತಗುಲುವ ಸಂದರ್ಭದಲ್ಲಿ ಮನೆಯಲ್ಲಿ 9 ಮಂದಿ ಇದ್ದರು. ಈ ವೇಳೆ 7 ಮಂದಿ ಹೊರಬಂದಿದ್ದಾರೆ. ಘಟನೆ ವೇಳೆ ಎಲ್ಲರೂ ಹೊರಬಂದಿದ್ದಾರೆ ಎಂದು ಉಳಿದವರು ತಿಳಿದುಕೊಂಡಿದ್ದರು. ಆದರೆ ಬಳಿಕ ಇಬ್ಬರು ಒಳಗೆ ಇರುವುದು ತಿಳಿದಿದೆ. ಆದರೆ ಅವರನ್ನು ರಕ್ಷಿಸುವ ವೇಳೆ ಒಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬರು ತೀವ್ರ ಅಸ್ವಸ್ಥರಾಗಿದ್ದಾರೆ.
ಇದನ್ನೂ ಓದಿ:ಮಂಗಳೂರು: ಬೈಕ್ ಅಡ್ಡಗಟ್ಟಿ ಯುವಕ, ಯುವತಿಗೆ ನೈತಿಕ ಪೊಲೀಸ್‌ಗಿರಿ, ಇಬ್ಬರ ಬಂಧನ
ಹಿಂದಿನ ಪ್ರಕರಣ:ಮಂಗಳೂರಲ್ಲೇ ನವೆಂಬರ್ 22 ರಂದು ಇದೇ ರೀತಿಯ ಪ್ರಕರಣವೊಂದು ನಡೆದಿತ್ತು.ಲಾಡ್ಜ್ ರೂಂ ಬೆಡ್ಗೆ ಬೆಂಕಿ ತಗುಲಿ ಯುವಕ ಜೀವಂತ ದಹನವಾದ ಘಟನೆ ಕಂಕನಾಡಿಯ ರೆಸಿಡೆನ್ಸಿ ಗೇಟ್ ಲಾಡ್ಜ್ನಲ್ಲಿ ಸಂಭವಿಸಿತ್ತು. ಬೆಂದೂರ್‌ವೆಲ್ ನಿವಾಸಿ ಯಶ್ ರಾಜ್ ಸುವರ್ಣ ಎಂಬುವರು (43) ಮೃತಪಟ್ಟಿದ್ದರು. ಮೃತ ಯಶ್ ರಾಜ್ ಸುವರ್ಣ ನವೆಂಬರ್ 15 ರಿಂದ ಹೋಟೆಲ್ನಲ್ಲಿ ವಾಸವಿದ್ದರು. ನವೆಂಬರ್ 22 ರಂದು ರಾತ್ರಿ ಊಟ ಮುಗಿಸಿ ರೂಂಗೆ ಹೋಗಿದ್ದರು. ರಾತ್ರಿ 12 ಗಂಟೆಯ ಹೊತ್ತಿಗೆ ರೂಂನಿಂದ ಹೊಗೆ ಕಾಣಿಸಿಕೊಂಡಿತ್ತು. ತಕ್ಷಣವೇ ಅಗ್ನಿಶಾಮಕ ದಳದವರಿಗೆ ಮಾಹಿತಿ ರವಾನಿಸಿದಾಗ ಅವರು ಬಂದು ಬೆಂಕಿ ನಂದಿಸಿದ್ದರು. ದುರಾದೃಷ್ಟವಶಾತ್ ಅಷ್ಟರಲ್ಲಿ ಬೆಂಕಿ ತಗುಲಿ ಯಶ್ ರಾಜ್ ಸುವರ್ಣ ಸಾವನ್ನಪ್ಪಿದ್ದರು. ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.
ಮತ್ತೊಂದೆಡೆ ಸಿಲಿಂಡರ್ ಅನಿಲ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡು ಕುಕ್ಕರ್ ಸ್ಫೋಟಗೊಂಡ ಪರಿಣಾಮ ಗೃಹಿಣಿಗೆ ಗಂಭೀರ ಗಾಯಗಳಾಗಿರುವ ಘಟನೆ ದಾವಣಗೆರೆಯ ವಿನೋಭ ನಗರದಲ್ಲಿ ಇತ್ತೀಚೆಗೆ ನಡೆದಿತ್ತು. ಸ್ಮಿತಾ (54) ಎಂಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.