ಮಂಗಳೂರು(ದಕ್ಷಿಣ ಕನ್ನಡ): ಕಾಂಗ್ರೆಸ್ ಮುಖಂಡೆ, ಟೋಲ್ ಗೇಟ್ ವಿರೋಧಿ ಹೋರಾಟಗಾರ್ತಿ ಪ್ರತಿಭಾ ಕುಳಾಯಿ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಮೆಂಟ್ ಮಾಡಿದ ವಿಚಾರದಲ್ಲಿ ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಅವರು ಟೋಲ್ ಗೇಟ್ ವಿರುದ್ಧ ಸಾಮಾಜಿಕ ಕಾರ್ಯಕರ್ತೆ ಪ್ರತಿಭಟನೆ ನಡೆಸುತ್ತಿರುವ ಫೋಟೋವನ್ನು ಹಾಕಿ ಅದಕ್ಕೆ ಅಶ್ಲೀಲ ಕಮೆಂಟ್ ಮಾಡಿರುವ ಬಗ್ಗೆ ದೂರು ಬಂದಿದ್ದು, ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಆರೋಪಿಗಳನ್ನು ಶೀಘ್ರವಾಗಿ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಸಮಾನ ಮನಸ್ಕ ಸಂಘಟನೆಗಳ ಮನವಿ :ಪ್ರತಿಭಾ ಕುಳಾಯಿ ಅವರನ್ನು ಲೈಂಗಿಕ ದೌರ್ಜನ್ಯ ಭಾಷೆಯಲ್ಲಿ ತೇಜೋವಧೆ ಮಾಡಿರುವ ಶ್ಯಾಮ ಸುದರ್ಶನ್ ಭಟ್ನನ್ನು ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ ಬಂಧಿಸಲು ಒತ್ತಾಯಿಸಿ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ಇಂದು ಪೊಲೀಸ್ ಉಪ ಆಯುಕ್ತರಿಗೆ ಮನವಿಯನ್ನು ಸಲ್ಲಿಸಲಾಯಿತು.