ಸುಬ್ರಹ್ಮಣ್ಯ (ದಕ್ಷಿಣ ಕನ್ನಡ):ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಮಾತಿಗೆ ಮಾತು ಬೆಳೆದು ತಂದೆಯೇ ಮಗನನ್ನು ಕೊಂದ ಘಟನೆ ಕಳೆದ ರಾತ್ರಿ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಏರಣಗುಡ್ಡೆ ಬಳಿ ನಡೆದಿದೆ. ಏರಣಗುಡ್ಡೆ ಮಾತೃಮಜಲು ನಿವಾಸಿ ಶೀನ ಎಂಬವರ ಮಗ ಶಿವರಾಮ (35) ಮೃತ ವ್ಯಕ್ತಿ. ಶೀನ ಹಾಗೂ ಅವರ ಮಗ ಶಿವರಾಮನಿಗೆ ಮಂಗಳವಾರ ಮಧ್ಯರಾತ್ರಿ 12 ಗಂಟೆಗೆ ಕೋಳಿ ಪದಾರ್ಥದ ವಿಚಾರವಾಗಿ ಜಗಳ ಆರಂಭವಾಗಿತ್ತು ಎಂದು ತಿಳಿದು ಬಂದಿದೆ.
ಕೊಲೆಯಾದ ವ್ಯಕ್ತಿಯ ಪತ್ನಿ ಕವಿತಾ ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ, ತನ್ನ ಗಂಡ ಶಿವರಾಮ ಕೂಲಿ ಕೆಲಸ ಮಾಡುತ್ತಿದ್ದು, ಪ್ರತಿದಿನ ಮನೆಗೆ ಬರುವಾಗ ಕುಡಿದು ಬಂದು ಗಲಾಟೆ ಮಾಡುತ್ತಿದ್ದರು. ಊಟ ಮಾಡುವ ಸಮಯದಲ್ಲಿ ಪದಾರ್ಥ ಸರಿ ಇಲ್ಲ ಎಂದು ಶಿವರಾಮ ಅವರ ತಂದೆ ತಾಯಿ ಹಾಗೂ ಒಮ್ಮೊಮ್ಮೆ ತನ್ನ ಜೊತೆಯೂ ಜಗಳವಾಡುತ್ತಿದ್ದರು.
ಹೀಗೆ ನಿನ್ನೆ ಮಧ್ಯರಾತ್ರಿ ಮನೆಗೆ ಬಂದವರು ಊಟ ಮಾಡುವ ಸಮಯ ಹಿಂದಿನ ದಿನ ಮಾಡಿದ ಕೋಳಿ ಪದಾರ್ಥ ಇಲ್ಲವೇ ಎಂದು ಅತ್ತೆ ತಂಗಮ್ಮ ಅವರನ್ನು ಕೇಳಿದ್ದಾರೆ. ಆಗ ಅವರು ಪದಾರ್ಥ ಮುಗಿದಿದೆ ಎಂದು ಹೇಳಿದ್ದಕ್ಕೆ, 'ನನಗೆ ಈಗಲೇ ಕೋಳಿ ಪದಾರ್ಥ ಬೇಕು' ಎಂದಿದ್ದಾರೆ. ಆಗ ಅತ್ತೆ, ಕೋಳಿ ತಂದು ಕೊಟ್ಟರೆ ಪದಾರ್ಥ ಮಾಡಿ ಕೊಡುವುದಾಗಿ ಹೇಳಿದ್ದಾರೆ. ಆಗ ತನ್ನ ಪತಿ ಸ್ವಲ್ಪ ದೂರ ಹೋಗಿ, ವಾಪಸ್ ಬಂದು ಮನೆಯಲ್ಲೇ ಇದ್ದ ಕೋಳಿಯನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಕೋಳಿ ಓಡಿಸುತ್ತಿದ್ದ ಪತಿಯನ್ನು ಮಾವ ಶೀನ ಅವರು ಯಾಕೆ ಕೋಳಿ ಓಡಿಸುತ್ತಿದ್ದೀಯ ಎಂದು ಕೇಳಿದ್ದಾರೆ.