ಸುಳ್ಯ(ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳಲ್ಲಿ ಹಾಗೂ ಹಿರಿಯರಲ್ಲಿ ಬಿಟ್ಟುಬಿಡದೆ ಜ್ವರ, ಕೆಮ್ಮು, ಶೀತ, ಮೈಕೈ ನೋವು ಕಾಣಿಸಿಕೊಳ್ಳುತ್ತಿದೆ. ಇದರಿಂದ ಮಕ್ಕಳ ಪೋಷಕರು ಆತಂಕ ಪಡುವಂತಾಗಿದೆ.
ಮದ್ದು ಪಡೆದರೂ ಕಡಿಮೆಯಾಗದ ಜ್ವರ: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಅದರಲ್ಲೂ ಸುಳ್ಯ, ಕಡಬ, ಪುತ್ತೂರು ತಾಲೂಕುಗಳಲ್ಲಿ ಪ್ರತಿ ದಿನ ಮಕ್ಕಳ ತಜ್ಞರ ಹತ್ತಿರ ಹಾಗೂ ಇತರ ವೈದ್ಯರ ಹತ್ತಿರ ಮಕ್ಕಳೇ, ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂಜೆಕ್ಷನ್ ಸೇರಿದಂತೆ ಚಿಕಿತ್ಸೆ ಪಡೆದರೂ ಜ್ವರ, ಕೆಮ್ಮು, ಶೀತ ಹೆಚ್ಚಿನ ಮಕ್ಕಳಲ್ಲಿ ಕಡಿಮೆಯಾಗುತ್ತಿಲ್ಲ ಎಂಬುದು ಆತಂಕಕಾರಿ ಸಂಗತಿಯಾಗಿದೆ.
ಹವಾಮಾನ ವ್ಯತ್ಯಾಸದಿಂದಾಗಿ ಸಾಮಾನ್ಯ ವೈರಾಣು ಜ್ವರ ಕಾಣಿಸಿಕೊಂಡಿದೆ. ಪೋಷಕರು ಆತಂಕ ಪಡಬೇಕಾಗಿಲ್ಲ ಎಂದು ವೈದ್ಯರು ಹೇಳುತ್ತಿದ್ದರೂ ಮದ್ದು ಕುಡಿದು, ಇಂಜೆಕ್ಷನ್ ಪಡೆದು ಮಕ್ಕಳು ಹೈರಾಣಾಗುತ್ತಿದ್ದಾರೆ.
ರೋಗ ಲಕ್ಷಣ ಏನು?: ಈ ವೈರಾಣು ಕಾಯಿಲೆಯಲ್ಲಿ ಮೊದಲು ಶೀತ ಹಾಗೂ ಕೆಮ್ಮು ಕಾಣಿಸಿಕೊಳ್ಳುತ್ತದೆ. ನಂತರ ಜ್ವರದೊಂದಿಗೆ ಕಫ, ನೆಗಡಿಯಿಂದ ಮಕ್ಕಳು ಬಳಲುತ್ತಿರುತ್ತಾರೆ. ಸರಿಯಾಗಿ ಊಟ ಮಾಡದೇ ಮಕ್ಕಳ ತೂಕವು ಕಡಿಮೆಯಾಗಿ ನಿತ್ರಾಣ ಸ್ಥಿತಿಗೆ ಮಕ್ಕಳು ತಲುಪುತ್ತಿದ್ದಾರೆ. ಹಸುಗೂಸುಗಳಿಂದ ಹಿಡಿದು ಸುಮಾರು 15 ವರ್ಷದ ಮಕ್ಕಳವರೆಗೆ ಇದು ಕಾಣಿಸಿಕೊಳ್ಳುತ್ತಿದೆ.
ಔಷಧಿ ಪಡೆದರೂ ಜ್ವರ, ಕೆಮ್ಮು, ನೆಗಡಿ ಕಡಿಮೆಯಾಗುತ್ತಿಲ್ಲ. ಮೂರ್ನಾಲ್ಕು ದಿನಗಳಲ್ಲಿ ಜ್ವರ ಕಡಿಮೆಯಾಗದಿದ್ದರೆ, ರಕ್ತ ಪರೀಕ್ಷೆ ನಡೆಸಲಾಗುತ್ತಿದೆ. ಈ ಸಮಯದಲ್ಲಿ ಡೆಂಗ್ಯೂ, ಟೈಫಾಯ್ಡ್, ಮಲೇರಿಯಾ ಹೆಚ್ಚಾಗಿ ಕಾಣಿಸಿಕೊಂಡಿಲ್ಲವಾದರೂ ಬಹುತೇಕ ಮಕ್ಕಳಲ್ಲಿ ಬ್ಲಡ್ ಇನ್ಫೆಕ್ಷನ್ ಕಾಣಿಸುತ್ತಿದೆ.
ಜಿಲ್ಲಾ ವೈದ್ಯಾಧಿಕಾರಿಗಳು ಏನಂತಾರೆ?: ಈ ಬಗ್ಗೆ 'ಈಟಿವಿ ಭಾರತ'ದ ಜೊತೆಗೆ ಮಾತನಾಡಿದ ಜಿಲ್ಲಾ ಅರೋಗ್ಯಧಿಕಾರಿ ಡಾ. ಕಿಶೋರ್ ಕುಮಾರ್ ಅವರು, ಪೋಷಕರು ಈ ಬಗ್ಗೆ ಆತಂಕ ಪಡಬೇಕಿಲ್ಲ. ಹವಾಮಾನ ವ್ಯತ್ಯಾಸವಾದಾಗ ಮತ್ತು ಕುಡಿಯುವ ನೀರು ಕಲುಷಿತವಾಗುವುದರಿಂದ ಈ ಸಮಯದಲ್ಲಿ ಜ್ವರ, ಕೆಮ್ಮು ನೆಗಡಿ ಲಕ್ಷಣಗಳು ಬರುವುದು ಸಹಜ. ಯಾರೂ ಭಯಪಡುವ ಅಗತ್ಯವಿಲ್ಲ. ಆದರೆ ಪೋಷಕರು ದೊಡ್ಡ ಮಟ್ಟದಲ್ಲಿ ಮುಂಜಾಗ್ರತೆ ವಹಿಸಬೇಕು. ಮಕ್ಕಳಿಗೆ ಬಿಸಿ ನೀರು ಮತ್ತು ಮನೆಯಲ್ಲೇ ತಯಾರಿಸುವ ಬಿಸಿ ಆಹಾರಗಳನ್ನೇ ನೀಡಬೇಕು. ಜಂಕ್ ಫುಡ್, ಫಾಸ್ಟ್ ಫುಡ್ ಗಳಿಂದ ಮಕ್ಕಳನ್ನು ದೂರ ಇಡಬೇಕು ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ:ಹನೂರಲ್ಲಿ ಮೆದುಳು ಜ್ವರ ಆತಂಕ: ಗಡಿಜಿಲ್ಲೆಯಲ್ಲಿ ಮೊದಲ ಶಂಕಿತ ಪ್ರಕರಣ ಪತ್ತೆ
ಮಳೆಗಾಲದಲ್ಲಿ ಹಳ್ಳ ಕೊಳ್ಳದಲ್ಲಿ ನಿಲ್ಲುವ ನೀರು, ಪಾತ್ರೆಗಳು, ತೆರೆದ ಚರಂಡಿಗಳಲ್ಲಿನ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ವೈರಾಣುಗಳ ಹರಡುವಿಕೆಗೆ ಕಾರಣವಾಗುತ್ತಿದೆ. ಸ್ವಚ್ಛತೆಯ ಕೊರತೆಯಿಂದಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಗ್ರಾಮ ಪಂಚಾಯಿತಿ, ಪಟ್ಟಣ, ನಗರ ಪ್ರದೇಶಗಳಲ್ಲಿ ನೈರ್ಮಲ್ಯಕ್ಕೆ ಹೆಚ್ಚು ಒತ್ತು ನೀಡಬೇಕು. ಪೋಷಕರು ಸ್ವತಃ ತಾವೇ ಮಕ್ಕಳಿಗೆ ಮದ್ದು ತೆಗೆದುಕೊಳ್ಳುವ ಬದಲು ಮಕ್ಕಳ ತಜ್ಞರನ್ನು, ವೈದ್ಯರನ್ನು ಭೇಟಿಯಾಗಿ ಪರಿಶೀಲನೆ ನಡೆಸಿಯೇ ಔಷಧಿ ಪಡೆಯಬೇಕು ಎಂದು ಹೇಳಿದರು.