ಮಂಗಳೂರು: ಹಿಂದೆಲ್ಲಾ ಹೆಣ್ಣು ಮಕ್ಕಳು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದರೆ ಅದನ್ನೇ ಹೆಚ್ಚು ಎಂದು ಭಾವಿಸಲಾಗಿತ್ತು. ಒಂದಿಷ್ಟು ಕಟ್ಟುಪಾಡುಗಳಿಗೆ ತುತ್ತಾಗಿ ಅದೆಷ್ಟೋ ಮಂದಿ ಶಿಕ್ಷಣದಿಂದ ದೂರ ಉಳಿದಿದ್ದರು. ಆದರೀಗ ಪರಿಸ್ಥಿತಿ ಬದಲಾಗಿದೆ.
ಸಹಜವಾಗಿ ಪರೀಕ್ಷಾ ಫಲಿತಾಂಶದಲ್ಲಿ ಮೇಲುಗೈ ಸಾಧಿಸುವ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಪಡೆಯಲು ಹೆಚ್ಚಿನ ಒಲವು ತೋರುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪಿಜಿ ಶಿಕ್ಷಣ ಪಡೆಯುತ್ತಿರುವವರ ಪೈಕಿ ಶೇ.68ರಷ್ಟು ವಿದ್ಯಾರ್ಥಿನಿಯರೇ ಇದ್ದಾರೆ.
ಮಂಗಳೂರು ವಿಶ್ವವಿದ್ಯಾಲಯದಲ್ಲಿ ಈ ಮೊದಲು ಮಹಿಳಾ ವಿದ್ಯಾರ್ಥಿನಿಯರ ಸಂಖ್ಯೆ ಕಡಿಮೆಯೇ ಇತ್ತು. ಆದರೆ, ಇತ್ತೀಚಿನ ಕೆಲ ವರ್ಷಗಳಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪಿಜಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾಗಿದೆ.
2014-15ರಲ್ಲಿ ಒಟ್ಟು 2,146 ವಿದ್ಯಾರ್ಥಿಗಳ ಪೈಕಿ 1,425 ಮಹಿಳಾ ವಿದ್ಯಾರ್ಥಿನಿಯರು, 2015-16ರಲ್ಲಿ ಒಟ್ಟು 2,241 ವಿದ್ಯಾರ್ಥಿಗಳ ಪೈಕಿ 1,449 ವಿದ್ಯಾರ್ಥಿನಿಯರು, 2016-17 ರಲ್ಲಿ 2,284 ವಿದ್ಯಾರ್ಥಿಗಳಲ್ಲಿ 1,544 ವಿದ್ಯಾರ್ಥಿನಿಯರು, 2017-18ರಲ್ಲಿ 2,189 ವಿದ್ಯಾರ್ಥಿಗಳಲ್ಲಿ 1,546 ವಿದ್ಯಾರ್ಥಿನಿಯರು, 2018-19 ರಲ್ಲಿ 2,039 ವಿದ್ಯಾರ್ಥಿಗಳ ಪೈಕಿ 1,470 ವಿದ್ಯಾರ್ಥಿನಿಯರು, 2019-20 ರಲ್ಲಿ 2,537 ವಿದ್ಯಾರ್ಥಿಗಳಲ್ಲಿ 1,745 ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಪಡೆದಿದ್ದಾರೆ. 6 ವರ್ಷಗಳಲ್ಲಿ ಉನ್ನತ ಶಿಕ್ಷಣವನ್ನು ಸರಾಸರಿ ಶೇ. 68ರಷ್ಟು ವಿದ್ಯಾರ್ಥಿನಿಯರೇ ಪಡೆದುಕೊಂಡಿದ್ದಾರೆ.