ಮಂಗಳೂರು: ವಿಮಾನದಲ್ಲಿ ಹೊರಟಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಸಿಬ್ಬಂದಿ ಅಭಿನಂದಿಸಿ ಗೌರವ ತೋರಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹಿದಾಯ ಫೌಂಡೇಶನ್ ಜುಬೈಲ್ ಘಟಕದ ವತಿಯಿಂದ ದುಬೈನ ದಮ್ಮಾಮ್ನಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಹರೇಕಳ ಹಾಜಬ್ಬ ಮಂಗಳೂರಿನಿಂದ ದಮ್ಮಾಮ್ಗೆ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಅವರನ್ನು ಗುರುತಿಸಿದ ಏರ್ ಇಂಡಿಯಾ ವಿಮಾನದ ಸಿಬ್ಬಂದಿ, ಕ್ಯಾಪ್ಟನ್ ಗಮನಕ್ಕೆ ತಂದಿದ್ದಾರೆ. ಆಗ ವಿಮಾನದ ಕ್ಯಾಪ್ಟನ್ ವಿಮಾನದಲ್ಲಿರುವ ಪ್ರಯಾಣಿಕರಿಗೆ ಹಾಜಬ್ಬ ಅವರನ್ನು ಪರಿಚಯಿಸಿದರು. "ಶಿಕ್ಷಣ ಕ್ಷೇತ್ರಕ್ಕೆ ಅಪೂರ್ವವಾದ ಸೇವೆ ಸಲ್ಲಿಸಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಅವರು ನಮ್ಮ ವಿಮಾನದಲ್ಲಿ ಪ್ರಯಾಣಿಸುತ್ತಿರುವುದು ನಮಗೆಲ್ಲ ತುಂಬಾ ಸಂತೋಷವಾಗಿದೆ. ಅವರಿಗೆ ಹೃದಯ ತುಂಬಿದ ಅಭಿನಂದನೆಗಳು" ಎಂದು ಹೇಳಿದ್ದಾರೆ.
ಕೆಲವು ನಿಮಿಷಗಳ ಕಾಲ ಹಾಜಬ್ಬ ಅವರ ಸ್ವಾರ್ಥವಿಲ್ಲದ ಸಾಧನೆಯ ಬಗ್ಗೆ ವಿಮಾನದ ಕ್ಯಾಪ್ಟನ್ ಕೊಂಡಾಡಿದ್ದಾರೆ. ಅವರ ಮಾತುಗಳಿಗೆ ಹರೇಕಳ ಹಾಜಬ್ಬ ಅವರು ಭಾವುಕರಾಗಿದ್ದು, ಆನಂದಭಾಷ್ಪ ಹರಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಕ್ಯಾಪ್ಟನ್ ಮಾತುಗಳ ನಡು-ನಡುವೆಯೇ ಹಾಜಬ್ಬ ಅವರು ಕ್ಯಾಪ್ಟನ್ ಸೇರಿದಂತೆ, ವಿಮಾನದಲ್ಲಿದ್ದ ಪ್ರಯಾಣಿಕರಿಗೆಲ್ಲರಿಗೂ ಸೇರಿ, ಎಂದಿನಂತೆ ತಮ್ಮ ಮುಗ್ಧತೆಯಿಂದ ತಲೆಬಾಗಿ ಕೈಮುಗಿದು ವಿಧೇಯತೆಯನ್ನು ತೋರಿದ್ದಾರೆ. ಪ್ರಯಾಣಿಕರು ಚಪ್ಪಾಳೆ ತಟ್ಟುವ ಮೂಲಕ ಅವರಿಗೆ ಗೌರವ ಸೂಚಿಸಿದರು. ಪ್ರಯಾಣಿಕರು ಕೆಲವರು ಸೇರಿದಂತೆ ವಿಮಾನದ ಸಿಬ್ಬಂದಿ ಹರೇಕಳ ಹಾಜಬ್ಬ ಜೊತೆಗೆ ನಿಂತು ಫೋಟೋ ಹಾಗೂ ಸೆಲ್ಫಿ ತೆಗೆಸಿಕೊಂಡರು.