ಕರ್ನಾಟಕ

karnataka

ETV Bharat / state

ಹರೇಕಳ ಹಾಜಬ್ಬ ಅವರಂತೆ ಬದುಕುವುದು ಅವರಿಂದ ಮಾತ್ರ ಸಾಧ್ಯ: ಗುರುವಪ್ಪ ಬಾಳೆಪುಣಿ

ಹರೇಕಳ ಹಾಜಬ್ಬರು ವ್ಯಾಪಾರಿಯೊಬ್ಬರಿಂದ ಸಾಲ ಪಡೆದು ಕಿತ್ತಳೆ ಹಣ್ಣು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಕಡುಬಡವ.‌ ವಿದೇಶಿ ದಂಪತಿಗಳು ಇಂಗ್ಲಿಷ್​ನಲ್ಲಿ ಕಿತ್ತಳೆ ಹಣ್ಣಿಗೆ ಎಷ್ಟು ಬೆಲೆ ಎಂದು ಕೇಳಿರೋದು ಹಾಜಬ್ಬನವರಿಗೆ ಅರ್ಥ ಆಗದಿರೋದು ಬಹುದೊಡ್ಡ ಅವಮಾನವಾಯಿತು. ಇದರಿಂದ ನನ್ನಂತೆ ನನ್ನ ಊರಿನ ಮಕ್ಕಳು ಅನಕ್ಷರಸ್ಥರಾಗಬಾರದೆಂದು ತನ್ನ ಊರಿನ ಮಕ್ಕಳಿಗೆ ಶಾಲೆ ನಿರ್ಮಾಣ ಮಾಡಬೇಕೆಂದು ಪಣತೊಟ್ಟರು.

Harekala Hajabba
ಹರೇಕಳ ಹಾಜಬ್ಬ

By

Published : Mar 11, 2020, 9:58 PM IST

ಮಂಗಳೂರು: ಸರಳತೆ, ಮುಗ್ಧತೆ ಪ್ರಾಮಾಣಿಕತೆ, ಪ್ರತಿಫಲ ಅಪೇಕ್ಷೆಯಿಲ್ಲದ ಸೇವೆಯಿಂದ ಪದ್ಮಶ್ರೀ ಪುರಸ್ಕೃತ 'ಅಕ್ಷರ ಸಂತ' ಹರೇಕಳ ಹಾಜಬ್ಬನವರು ಇಂದು ಆಕಾಶದೆತ್ತರಕ್ಕೆ ಏರಿದ್ದಾರೆ. ಇದರಿಂದ ಜಗತ್ತು ಅವರನ್ನು ಗುರುತಿಸಿತು ಎಂದು ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ ಹೇಳಿದರು.

ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ಸನ್ಮಾನ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಗರದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ನಡೆದ ಸಾಧಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳನ್ನು ದತ್ತು ಪಡೆದ ಹೆತ್ತವರು ಯಾವ ರೀತಿಯಲ್ಲಿ ಪ್ರೀತಿಯನ್ನು ಧಾರೆಯೆರೆದು ಸಾಕುತ್ತಾರೋ, ಅದೇ ರೀತಿ ಹಾಜಬ್ಬನವರು ತಮ್ಮ ಶಾಲೆಯ ವಿಚಾರದಲ್ಲಿ ಪ್ರೀತಿ ತೋರಿಸುತ್ತಿದ್ದಾರೆ ಎಂದು ಹೇಳಿದರು.

ಪದ್ಮಶ್ರೀಯಂತಹ ಭಾರತದ ಶ್ರೇಷ್ಠ ಪ್ರಶಸ್ತಿಯನ್ನು ಎಲೆಮರೆ ಕಾಯಿಯಂತಿರುವ ಹರೇಕಳ ಹಾಜಬ್ಬರಿಗೆ ನೀಡಿದ ಕೇಂದ್ರ ಸರಕಾರಕ್ಕೆ ಸೆಲ್ಯೂಟ್ ಹೇಳಲೇಬೇಕು ಎಂದು ಹೇಳಿದರು‌. ಹರೇಕಳ ಹಾಜಬ್ಬರು ವ್ಯಾಪಾರಿಯೊಬ್ಬರಿಂದ ಸಾಲ ಪಡೆದು ಕಿತ್ತಳೆ ಹಣ್ಣು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಕಡುಬಡವ.‌ ವಿದೇಶಿ ದಂಪತಿಗಳು ಇಂಗ್ಲಿಷ್​ನಲ್ಲಿ ಕಿತ್ತಳೆ ಹಣ್ಣಿಗೆ ಎಷ್ಟು ಬೆಲೆ ಎಂದು ಕೇಳಿರೋದು ಹಾಜಬ್ಬನವರಿಗೆ ಅರ್ಥ ಆಗದಿರೋದು ಬಹುದೊಡ್ಡ ಅವಮಾನವಾಯಿತು. ಇದರಿಂದ ನನ್ನಂತೆ ನನ್ನ ಊರಿನ ಮಕ್ಕಳು ಅನಕ್ಷರಸ್ಥರಾಗಬಾರದೆಂದು ತನ್ನ ಊರಿನ ಮಕ್ಕಳಿಗೆ ಶಾಲೆ ನಿರ್ಮಾಣ ಮಾಡಬೇಕೆಂದು ಪಣತೊಟ್ಟರು. ಇದಕ್ಕಾಗಿ ಶಾಸಕರಿಂದ ಅಧಿಕಾರಿಗಳವರೆಗೆ ಸುಮಾರು 6 ವರ್ಷಗಳ ಕಾಲ ಓಡಾಡಿದರು. ಪರಿಣಾಮ 2001 ಇಸವಿಗೆ ನ್ಯೂಪಡ್ಪು ಮದರಸಾದ ಕೋಣೆಯೊಂದರಲ್ಲಿ 28 ಮಕ್ಕಳಿಗೆ ಶಾಲೆ ಆರಂಭವಾಗಿಯೇ ಬಿಟ್ಟಿತು.

ಮುಂದೆ 45 ಸೆಂಟ್ಸ್ ಜಮೀನು ಗುರುತಿಸಿ ತಾನು ಕಷ್ಟಪಟ್ಟು ದುಡಿದು ಉಳಿಸಿದ 5000 ರೂ.ಹಣವನ್ನು ಹಾಜಬ್ಬನವರು ಶಾಲೆಗೆ ದೇಣಿಗೆ ನೀಡಿದರು. ಅಲ್ಲದೆ ಅಲ್ಲಿ ಎಲ್ಲಾ ದಾನಿಗಳ ಸಹಕಾರದಿಂದ ಶಾಲೆ ತಲೆ ಎತ್ತಿ ನಿಂತಿತು. ಅಲ್ಲದೆ ಆ ಬಳಿಕ ಅವರು ತಮ್ಮ ಸರಕಾರಿ ಶಾಲೆಗೆ 50 ರಿಂದ 55 ಲಕ್ಷ ರೂ.ಹಣವನ್ನು ಸಂಗ್ರಹಿಸಿದ್ದಾರೆ‌. ಅದರಲ್ಲಿ ಅವರಿಗೆ ಸಂದ ಪ್ರಶಸ್ತಿಗಳ ಮೊತ್ತವೂ ಸೇರಿದೆ ಎಂಬುದು ಮಹತ್ತರವಾದ ಸಂಗತಿ. ಅಲ್ಲದೆ ಅವರ ಶಾಲೆಯಲ್ಲಿ ಹತ್ತು ಪ್ಲೇಟ್​ಗಳನ್ನು ಕೊಟ್ಟವರ ಮಾಹಿತಿಯೂ ಇದೆ. ಆದರೆ ಎಲ್ಲೂ ಹರೇಕಳ ಹಾಜಬ್ಬರ ಹೆಸರು ಇಲ್ಲ. ಆದ್ದರಿಂದ ಹರೇಕಳ ಹಾಜಬ್ಬರಂತೆ ಬದುಕಲು ಅವರಿಗೆ ಮಾತ್ರ ಸಾಧ್ಯ. ಬೇರೆ ಯಾರಿಗೂ ಆ ರೀತಿ ಬದುಕಲು ಸಾಧ್ಯವಿಲ್ಲ ಎಂದು ಗುರುವಪ್ಪ ಬಾಳೆಪುಣಿ ಹೇಳಿದರು.

ಇನ್ನು ಈ ಸಂದರ್ಭ ಮಂಗಳೂರು ಸಿಟಿ ಬಸ್ ಮಾಲಕರ ಸಂಘದ ವತಿಯಿಂದ ಹರೇಕಳ ಹಾಜಬ್ಬರಿಗೆ ಸನ್ಮಾನ ಮಾಡಿ ಒಂದು ಲಕ್ಷ ರೂ. ಚೆಕ್ ನೀಡಲಾಯಿತು.

ABOUT THE AUTHOR

...view details