ಸುಬ್ರಹ್ಮಣ್ಯ(ದಕ್ಷಿಣ ಕನ್ನಡ):ಗುಡ್ಡ ಕುಸಿಯುವ ಭೀತಿ ಹಿನ್ನೆಲೆ ಕುಕ್ಕೆ ಸುಬ್ರಹ್ಮಣ್ಯ ಗ್ರಾಮದ ನೂಚಿಲ ಎಂಬಲ್ಲಿರುವ 8 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಕಡಬ ತಾಲೂಕು ಆಡಳಿತ ಸೂಚಿಸಿತ್ತು. ಅದರಂತೆ ಈ ಕುಟುಂಬಗಳಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಜು. 8ರಂದು ಇವರನ್ನು ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.
ಆದಿ ಸುಬ್ರಹ್ಮಣ್ಯ ದೇವಸ್ಥಾನ ಬಳಿಯ ನೂಚಿಲ ಗುಡ್ಡದ ಬುಡದಲ್ಲೇ ಮಣ್ಣು ಸಮತಟ್ಟು ಮಾಡಿ ಈ ಪ್ರದೇಶದಲ್ಲಿ 8 ಕುಟುಂಬಗಳು ಮನೆ ಕಟ್ಟಿಕೊಂಡು ವಾಸವಾಗಿದ್ದವು. ಕಳೆದ ಕೆಲ ದಿನಗಳಿಂದ ಸುರಿದ ಧಾರಾಕಾರ ಮಳೆ ಹಿನ್ನೆಲೆ ಗುಡ್ಡ ಕುಸಿದು ಬೀಳುವ ಅಪಾಯ ಹೆಚ್ಚಾಗಿದೆ. ಈ ಹಿನ್ನೆಲೆ ಇಲ್ಲಿರುವ ಕುಟುಂಬಗಳನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಭಯ ಪ್ರವಾಸಿ ಮಂದಿರದಲ್ಲಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಭಾರಿ ಗಾಳಿ, ಮಳೆ: ದ.ಕ. ಜಿಲ್ಲೆಯಲ್ಲಿ 380 ಜನರು ಸುರಕ್ಷಿತ ಸ್ಥಳಕ್ಕೆ
ಗೀತಾ ಸತೀಶ್ ನೂಚಿಲ, ಪದ್ಮಯ್ಯ ನೂಚಿಲ, ದುಗ್ಗಣ್ಣ ನೂಚಿಲ, ದಿನೇಶ್ ನೂಚಿಲ, ಶೋಭಾ ಭಾಸ್ಕರ ನೂಚಿಲ, ದೇವಕಿ ಬಾಲಕೃಷ್ಣ, ಶೋಭಾ ಪ್ರಮೋದ್ ಕುಮಾರ್ ಹಾಗೂ ಬಿ.ಎನ್. ರಾಧಾಕೃಷ್ಣ ಎಂಬವರ ಮನೆಗಳನ್ನು ಸ್ಥಳಾಂತರ ಮಾಡಲಾಗಿದೆ. ಕಡಬ ತಹಶೀಲ್ದಾರ್ ಈ ಕುಟುಂಬಗಳಿಗೆ ಜು. 7ರಂದು ನೋಟಿಸ್ ಜಾರಿ ಮಾಡಿದ್ದರು. ತಕ್ಷಣವೇ ಮನೆಗಳಿಂದ ತೆರವಾಗಿ ಬೇರೆ ಕಡೆ ವಾಸ್ತವ್ಯ ಹೂಡಬೇಕು ಅಥವಾ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಳ್ಳಬೇಕು. ತಪ್ಪಿದಲ್ಲಿ ವಿಪತ್ತು ನಿರ್ವಹಣಾ ಕಾಯಿದೆಯಡಿ ಮನೆ ಖಾಲಿ ಮಾಡಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಅಲ್ಲದೇ ಮಳೆಗಾಲ ಮುಗಿಯುವವರೆಗೆ ಈ ಮನೆಗಳನ್ನು ಬಳಸದಂತೆಯೂ ಸೂಚನೆ ನೀಡಿದ್ದರು.