ಕರ್ನಾಟಕ

karnataka

ETV Bharat / state

ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನ: ಪಾಪಿ ತಂದೆಗೆ 5 ವರ್ಷ ಜೈಲು - ಪುತ್ತೂರಿನ ವಿಶೇಷ ನ್ಯಾಯಾಲಯ

ದಂಡದ ಮೊತ್ತದಲ್ಲಿ ರೂ. 25,000/-ಯನ್ನು ಬಾಲಕಿಗೆ ನೀಡಲು ಮಾನ್ಯ ನ್ಯಾಯಾಲಯವು ಆದೇಶಿಸಿದೆ. ನ್ಯಾಯಾಲಯವು ಬಾಲಕಿಗೆ ದಂ.ಪ್ರ.ಸಂ. ಕಲಂ 357(ಎ) ಹಾಗೂ ಪೋಕ್ಸೊ ಕಾಯ್ದೆ ಕಲಂ 33(8) ಜೊತೆಗೆ ನಿಯಮ 7 ರಡಿ ರೂ.1,00,000/- ಲಕ್ಷ ಪರಿಹಾರ ನೀಡಲು ದ.ಕ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶ ನೀಡಿದೆ..

father-sentenced-to-5-years
ಪಾಪಿ ತಂದೆಗೆ 5 ವರ್ಷ ಜೈಲು

By

Published : Jun 21, 2021, 9:25 PM IST

ಸುಳ್ಯ :ತಾಲೂಕಿನ ಎಣ್ಮೂರು ಎಂಬಲ್ಲಿ ಅಪ್ರಾಪ್ತ ಮಗಳ ಮೇಲೆ ಆರು ವರ್ಷಗಳ ಹಿಂದೆ ಸ್ವತಃ ತಂದೆಯೇ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರಿನ ವಿಶೇಷ ನ್ಯಾಯಾಲಯ ಹಾಗೂ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗೆ ಜೈಲು‌ ಶಿಕ್ಷೆ ವಿಧಿಸಿದೆ.

ಸ್ವತಃ ಪುತ್ರಿಯ ಮೇಲೆ ತಂದೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ಘಟನೆಯ ಬಗ್ಗೆ ಬಾಲಕಿಯ ತಾಯಿಯು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಆರೋಪಿಯ ವಿರುದ್ಧ ಕಲಂ 376, 504, 323 ಮತ್ತು ಪೋಕ್ಸೋ ಕಾಯ್ದೆ ಕಲಂ 4ರ ಪ್ರಕಾರ ಪ್ರಕರಣ ದಾಖಲಿಸಿದ್ದರು. ಅಂದಿನ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕ ಸತೀಶ್‌ ಆರೋಪಿಯ ವಿರುದ್ಧ ಸಮಗ್ರ ತನಿಖೆ ನಡೆಸಿ ಪೋಕ್ಸೋ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಆರೋಪಿಯು ಬಾಲಕಿಯ ತಂದೆ ಎಂಬ ಕಾರಣದಿಂದಾಗಿ ಮಾನ್ಯ ನ್ಯಾಯಾಲಯವು ವಿಚಾರಣಾ ಸಮಯದಲ್ಲಿ ಪೋಕ್ಸೋ ಕಲಂ 6ನ್ನು ಕೂಡ ಸೇರಿಸಿತ್ತು.

ಅಂತಿಮವಾಗಿ ಆರೋಪಿಯು ಬಾಲಕಿಯನ್ನು ಅತ್ಯಾಚಾರವೆಸಗಲು ಪ್ರಯತ್ನಿಸಿದ್ದಾಗಿ ಮಾನ್ಯ ನ್ಯಾಯಾಲಯವು ಅಭಿಪ್ರಾಯಪಟ್ಟು ಆರೋಪಿ ತಪ್ಪಿತಸ್ಥನೆಂದು ಇಂದು ತೀರ್ಪು ನೀಡಿದೆ. ಆರೋಪಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ರೂಪಾಯಿ 25,000/-ದಂಡ, ದಂಡ ತೆರಲು ತಪ್ಪಿದ್ದಲ್ಲಿ ಹೆಚ್ಚುವರಿಯಾಗಿ 1 ವರ್ಷ ಸಾದಾ ಸ್ವರೂಪದ ಶಿಕ್ಷೆ ವಿಧಿಸಿದೆ.

ಮಾತ್ರವಲ್ಲದೆ ಆರೋಪಿಯು ಬಾಲಕಿಯ ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಹಿನ್ನೆಲೆ 4 ತಿಂಗಳ ಸಾದಾ ಸ್ವರೂಪದ ಶಿಕ್ಷೆ ಮತ್ತು ರೂ. 1,000/- ದಂಡವನ್ನು ವಿಧಿಸಿದೆ. ದಂಡ ತೆರಲು ತಪ್ಪಿದ್ದಲ್ಲಿ ಹೆಚ್ಚುವರಿಯಾಗಿ 1 ತಿಂಗಳ ಸಾದಾ ಸ್ವರೂಪದ ಶಿಕ್ಷೆ ಹಾಗೂ ಆರೋಪಿಯು ಬಾಲಕಿಯ ತಾಯಿಗೆ ಹಲ್ಲೆ ಮಾಡಿದ ಕಾರಣದಿಂದಾಗಿ 4 ತಿಂಗಳ ಸಾದಾ ಸ್ವರೂಪದ ಶಿಕ್ಷೆ ಮತ್ತು ರೂ. 500/- ದಂಡ ವಿಧಿಸಿದೆ. ದಂಡ ತೆರಲು ತಪ್ಪಿದ್ದಲ್ಲಿ 15 ದಿನ ಸಾದಾ ಸ್ವರೂಪದ ಶಿಕ್ಷೆ ವಿಧಿಸಿದೆ.

ದಂಡದ ಮೊತ್ತದಲ್ಲಿ ರೂ. 25,000/-ಯನ್ನು ಬಾಲಕಿಗೆ ನೀಡಲು ಮಾನ್ಯ ನ್ಯಾಯಾಲಯವು ಆದೇಶಿಸಿದೆ. ನ್ಯಾಯಾಲಯವು ಬಾಲಕಿಗೆ ದಂ.ಪ್ರ.ಸಂ. ಕಲಂ 357(ಎ) ಹಾಗೂ ಪೋಕ್ಸೊ ಕಾಯ್ದೆ ಕಲಂ 33(8) ಜೊತೆಗೆ ನಿಯಮ 7 ರಡಿ ರೂ.1,00,000/- ಲಕ್ಷ ಪರಿಹಾರ ನೀಡಲು ದ.ಕ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶ ನೀಡಿದೆ.

ಓದಿ:ಫೋನ್‌ ಟ್ಯಾಪಿಂಗ್ ಆರೋಪ : ಅರವಿಂದ್ ಬೆಲ್ಲದ್ ಯಾರೋ ಗೊತ್ತೇ ಇಲ್ಲ ಎಂದ ಯುವರಾಜ್

ABOUT THE AUTHOR

...view details