ಬೆಳ್ತಂಗಡಿ (ದಕ್ಷಿಣ ಕನ್ನಡ): ಬಹುರಾಷ್ಟ್ರೀಯ ಕಂಪನಿಗಳಿಗೆ ರತ್ನಗಂಬಳಿ ಹಾಸುವ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಸೂದೆಯನ್ನು ರಾಜ್ಯ ಸರ್ಕಾರ ವಾಪಸ್ ಪಡೆಯುವಂತೆ ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಸಿಪಿಐ(ಎಂ) ನೇತೃತ್ವದಲ್ಲಿ ಶುಕ್ರವಾರ ಬೆಳ್ತಂಗಡಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ ಎಸ್.ಎಂ.ಶಿವಕುಮಾರ್ ಮಾತನಾಡಿ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಬಂಡವಾಳಶಾಹಿಗಳ ಲಾಬಿಗೆ ಸರ್ಕಾರ ಮುಂದಾಗಿದೆ. ಬಹುರಾಷ್ಟ್ರೀಯ ಕಂಪನಿಗಳ ಲೂಟಿಗೆ ನೆರವಾಗವ ಈ ಕಾಯ್ದೆಯ ಸುಗ್ರೀವಾಜ್ಞೆ ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ದೇಶಾದ್ಯಂತ ಜನ ದಂಗೆ ಏಳುತ್ತಾರೆ ಎಂದು ಎಚ್ಚರಿಸಿದರು.
ಬೇಡಿಕೆಗಳು
ಲಾಕ್ಡೌನ್ನಿಂದ ಸಂಕಷ್ಟಕ್ಕೊಳಗಾದ ಬಡವರಿಗೆ, ರೈತರಿಗೆ, ಕೃಷಿ ಕೂಲಿಕಾರರು ಹಾಗೂ ಕಾರ್ಮಿಕರಿಗೆ ಲಾಕ್ಡೌನ್ ಅವಧಿಯ ಮತ್ತು ಮುಂದಿನ 3 ತಿಂಗಳಿಗೆ ಅಗತ್ಯವಾದ ದಿನಸಿ ಕಿಟ್ ವಿತರಿಸಬೇಕು.
ಎಲ್ಲಾ ರೀತಿಯ ಸಾಲ ಮನ್ನಾ ಮಾಡಬೇಕು. ಬೆಳೆ ನಷ್ಟ ಪರಿಹಾರ ಪ್ರತಿ ಎಕರೆಗೆ ₹ 10,000 ನೀಡಬೇಕು. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಕಾರ್ಮಿಕರಿಗೆ ಲಾಕ್ಡೌನ್ ಅವಧಿಯ ಬಾಕಿ ವೇತನವನ್ನು ಸರ್ಕಾರವೇ ಭರಿಸಬೇಕು.
ನಿರುದ್ಯೋಗಿಗಳಿಗೆ ₹ 10,000 ನಿರುದ್ಯೋಗ ಭತ್ಯೆ ನೀಡಬೇಕು. ಅತಿಥಿ ಉಪನ್ಯಾಸಕರಿಗೆ ಏಪ್ರಿಲ್, ಮೇ ತಿಂಗಳ ಗೌರವಧನ ನೀಡಬೇಕು. ಕಾರ್ಮಿಕ ಕಾನೂನುಗಳನ್ನು ಅಮಾನತುಗೊಳಿಸಲು ನಡೆಯುತ್ತಿರುವ ಎಲ್ಲಾ ಪ್ರಯತ್ನಗಳನ್ನು ಕೈ ಬಿಡಬೇಕು. ಕೊರೊನಾ ಫ್ರಂಟ್ ಲೈನ್ ಕಾರ್ಮಿಕರಿಗೆ ರಕ್ಷಣೆ ಹಾಗೂ ಕೆಲಸದ ಭದ್ರತೆ ನೀಡಬೇಕು ಎಂದು ಸಿಪಿಐ (ಎಂ) ಒತ್ತಾಯಿಸಿದೆ.