ಕಡಬ(ದಕ್ಷಿಣ ಕನ್ನಡ):ಆನ್‌ಲೈನ್ ಮೂಲಕ ಹಣ ಲಪಟಾಯಿಸುವ ವಂಚಕರು ಸಕ್ರಿಯವಾಗಿ ತೊಡಗಿಕೊಂಡಿದ್ದು, ಇದೀಗ ಹಲವು ಕಡೆಗಳಲ್ಲಿ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ಬಳಸಿ ಹಣ ದೋಚುತ್ತಿರುವ ಮಾಹಿತಿ ಲಭ್ಯವಾಗಿದೆ.
ಪೊಲೀಸರ ಹೆಸರಲ್ಲಿ ಫೇಕ್ ಫೇಸ್ಬುಕ್ ಖಾತೆ: ವಂಚನೆಗೆ ಬಲಿಯಾಗದಂತೆ ಅಧಿಕಾರಿ ಕರೆ - Kadaba Latest News
ಕಡಬ ಮೂಲದ ಸದ್ಯ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿರುವ ಸುರೇಶ್ ಅವರ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ ರಚಿಸಿ, ಹಣ ದೋಚಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.
![ಪೊಲೀಸರ ಹೆಸರಲ್ಲಿ ಫೇಕ್ ಫೇಸ್ಬುಕ್ ಖಾತೆ: ವಂಚನೆಗೆ ಬಲಿಯಾಗದಂತೆ ಅಧಿಕಾರಿ ಕರೆ Fake Facebook account in police name: Officer calls for not falling victim to fraud](https://etvbharatimages.akamaized.net/etvbharat/prod-images/768-512-8835940-thumbnail-3x2-sss.jpg)
ಕಡಬ ಮೂಲದ ಸದ್ಯ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿರುವ ಸುರೇಶ್ ಕುಮಾರ್ ಅವರ ಹೆಸರಿನ ವಂಚಕರು ನಕಲಿ ಫೇಸ್ಬುಕ್ ಖಾತೆ ತೆರೆದಿದ್ದಾರೆ. ಆನಂತರ ಕಡಬದ ಅಶೋಕ್ ಎಂಬುವವರಿಗೆ ಫೇಸ್‌ಬುಕ್ ಮೆಸೆಂಜರ್ ಮೂಲಕ 30 ಸಾವಿರ ತುರ್ತು ಹಣದ ಅಗತ್ಯವಿದ್ದು, ತಕ್ಷಣವೇ ಹಣ ಕಳುಹಿಸಿಕೊಡುವಂತೆ ಸಂದೇಶ ಕಳುಹಿಸಿದ್ದಾರೆ. ಈ ಬಗ್ಗೆ ಅನುಮಾನಗೊಂಡ ಅಶೋಕ್ ಅವರು ನೇರವಾಗಿ ಸುರೇಶ್ ಕುಮಾರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಸತ್ಯಾಂಶ ಬಯಲಾಗಿದೆ.
ಈ ಬಗ್ಗೆ ಫೋನ್ ಮುಖಾಂತರ ಈಟಿವಿ ಭಾರತದ ಜೊತೆಗೆ ಮಾತನಾಡಿದ ಇನ್ಸ್‌ಪೆಕ್ಟರ್ ಸುರೇಶ್ ಅವರು, ಆನ್‌ಲೈನ್ ವಂಚಕರಿಂದ ಯಾರೂ ಮೋಸ ಹೋಗದಂತೆ ಎಚ್ಚರದಿಂದಿರಲು ತಿಳಿಸಿದ್ದಾರೆ. ಜೊತೆಗೆ ಈ ತರಹದ ಮೆಸೇಜ್, ಫೋನ್‌ಗಳು ಬಂದರೆ ಯಾವುದೇ ಕಾರಣಕ್ಕೂ ಹಣ ವರ್ಗಾವಣೆ ಮಾಡಬಾರದೆಂದು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುವಂತೆಯೂ ವಿನಂತಿ ಮಾಡಿದ್ದಾರೆ.