ಸುಳ್ಯ (ದಕ್ಷಿಣ ಕನ್ನಡ): ಜಾಲ್ಸೂರು ಗ್ರಾಮದ ಅಡ್ಕಾರ್ ವಿನೋಬನಗರ ವಿವೇಕಾನಂದ ಖಾಸಗಿ ಶಾಲೆಯಲ್ಲಿದ್ದ ಮಕ್ಕಳ ಬಿಸಿಯೂಟದ ಹಳೆಯ ಅಕ್ಕಿಯನ್ನು ಸ್ಥಳೀಯ ಅಡ್ಕಾರ್ನಲ್ಲಿನ ಪಡಿತರ ಅಂಗಡಿ ಮೂಲಕ ಹೊಸ ಅಕ್ಕಿಯೊಂದಿಗೆ ಪರಸ್ಪರ ಬದಲಾಯಿಸಿಕೊಂಡಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶಾಲೆಯಲ್ಲಿ ಹಳೆಯ ಅಕ್ಕಿ ಇದ್ದು ಇಲ್ಲಿನ ಸಿಬ್ಬಂದಿ ಅಕ್ಕಿ ವಾಸನೆ ಬರುವ ಬಗ್ಗೆ ದೂರಿತ್ತ ಹಿನ್ನೆಲೆ, ಬೇರೊಂದು ಅಕ್ಕಿಯೊಂದಿಗೆ ಬದಲಾವಣೆ ಮಾಡಲು ಶಾಲಾ ಮುಖ್ಯ ಶಿಕ್ಷಕರನ್ನೇ ಮುಂದೆ ನಿಲ್ಲಿಸಿ ಶಾಲಾ ಆಡಳಿತ ವ್ಯವಸ್ಥೆ ಈ ಕೆಲಸ ಮಾಡಿದೆ ಎನ್ನಲಾಗಿದೆ. ಮಾತ್ರವಲ್ಲದೇ 50 ಕೆ.ಜಿ ಬರುವ ಈ ಗೋಣಿ ಚೀಲ ಹೊರಲು ಸ್ವತಃ ಶಾಲಾ ಮಕ್ಕಳನ್ನೇ ಪಾಠದ ಸಮಯದಲ್ಲಿ ಬಾಲ ಕಾರ್ಮಿಕರ ರೀತಿ ದುಡಿಸಿದ ಆರೋಪವೂ ಕೇಳಿಬಂದಿದೆ.
ಶಾಲಾ ಮುಖ್ಯ ಶಿಕ್ಷಕ ಜಯಪ್ರಕಾಶ ಕಾರಿಂಜರು ಮಕ್ಕಳ ಬಿಸಿಯೂಟದ ಅಕ್ಕಿಯನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಾರದೇ, ಸರ್ಕಾರದ ಪಡಿತರ ವ್ಯವಸ್ಥೆಯಲ್ಲಿ ವಿತರಿಸಬೇಕಿದ್ದ ಅಕ್ಕಿಯೊಂದಿಗೆ ಸ್ಥಳೀಯ ಅಡ್ಕಾರ್ ಪಡಿತರ ಅಂಗಡಿಯಲ್ಲಿ ಬದಲಾವಣೆ ಮಾಡಲು ಮುತುವರ್ಜಿ ವಹಿಸಿದ್ದು, ಈ ಕೆಲಸಕ್ಕೆ ಕನಕಮಜಲು ಪ್ರಾಥಮಿಕ ಕೃಷಿಪತ್ತಿನ ಸಂಘ ಇದರ ಅಡ್ಕಾರ್ ಶಾಖಾ ಮ್ಯಾನೇಜರ್ ಗಂಗಾಧರ್ ಅಡ್ಕರ್ ಸಾಥ್ ಕೊಟ್ಟಿದ್ದಾರೆ ಎನ್ನಲಾಗಿದೆ.