ಬೆಳ್ತಂಗಡಿ(ದ.ಕ): ತಾಲೂಕಿನಲ್ಲಿ ಶಾಸಕರ ತಾಳಕ್ಕೆ ತಕ್ಕಂತೆ ಅಧಿಕಾರಿಗಳು ಕುಣಿಯುತ್ತಿದ್ದು ಜನಸಾಮಾನ್ಯರು ತೊಂದರೆ ಪಡುವಂತಾಗಿದೆ. ತಾಲೂಕಿಗೆ ತಾವೇ ಹೈಕಮಾಂಡ್ ಎಂಬಂತೆ ಶಾಸಕರು ವರ್ತಿಸುತ್ತಿದ್ದು, ಅಧಿಕಾರಿಗಳ ಮೂಲಕ ತಮ್ಮ ವಿರುದ್ಧ ಮಾತನಾಡುವವರ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ನಾವು ಇದನ್ನು ಸಹಿಸಿಕೊಳ್ಳುವುದಿಲ್ಲ ಎಂದು ಮಾಜಿ ಶಾಸಕ ಕೆ.ವಸಂತ ಬಂಗೇರ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಹಾಗೂ ತಾಲೂಕಿನ ವಿವಿಧ ಸಂಘಟನೆಗಳಿಂದ ಬೆಳ್ತಂಗಡಿ ಮಿನಿ ವಿಧಾನಸೌಧ ವಠಾರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ತಾಲೂಕಿನಲ್ಲಿ ಅಕ್ರಮಗಳು ನಡೆದಿದೆ. ಮತ ಪೆಟ್ಟಿಗೆಗಳನ್ನು ಇಡುವ ಕೋಣೆಗಳಿಗೆ ಯಾರಿಗೂ ಪ್ರವೇಶ ಇರುವುದಿಲ್ಲ. ಆದರೂ ಕೆಲವರು ಬಿಜೆಪಿಗರು ಆ ಕೋಣೆಯೊಳಗೆ ಹೋಗಿದ್ದಾರೆ. ಮತ ಎಣಿಕೆ ಸಂದರ್ಭ ಗೊಂದಲದ ಬಗ್ಗೆ ಚುನಾವಣಾಧಿಕಾರಿಗಳಿಗೆ ವಿಚಾರ ತಿಳಿಸಿದಾಗ ಅವರು ಸರಿಯಾದ ಕ್ರಮ ಕೈಗೊಂಡಿಲ್ಲ. ಇದು ಖಂಡನೀಯ ಎಂದರು.
ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಹಾಗೂ ತಹಶೀಲ್ದಾರ್ ಮೊದಲಾದವರು ಶಾಸಕರ ಬಂಟರಂತೆ ವರ್ತಿಸುತಿದ್ದಾರೆ. ಇವರೇ ಈ ಅಕ್ರಮಕ್ಕೆ ಕಾರಣ. ಈ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಕ್ಕಾಗಿ, ಸತ್ಯ ಪ್ರಮಾಣಕ್ಕೆ ಹೆಸರುವಾಸಿಯಾದ ಕೇರಳದ ಕಾನತ್ತೂರಿಗೆ ಹೋಗಿ ಪ್ರಾರ್ಥಿಸುತ್ತೇವೆ. ಅಕ್ರಮ ಎಸಗಿದವರ ವಿರುದ್ಧ ದೈವದ ಮೊರೆ ಹೋಗಲಾಗುವುದು ಎಂದರು.